ಬೆಳಗಾವಿ: ನಗರದ ಸೇವಾ ಭಾರತಿ ರಜತ ಮಹೋತ್ಸವ ಹಿನ್ನೆಲೆಯಲ್ಲಿ ದಿನಾಂಕ ಜನವರಿ 17, 2025 ರಂದು ಸೇವಾ ಭಾರತೀಯ ರಜತ ಮಹೋತ್ಸವ ಸಮಾರೋಹ ಸಮಿತಿಯ ಕಾರ್ಯದರ್ಶಿಯಾದ ಎಚ್ ಡಿ ಪಾಟೀಲ್, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಸ್ಪೂರ್ತಿ ಅಂಗಡಿ ಪಾಟೀಲ್ ಹಾಗೂ ಸೇವಾ ಭಾರತಿ ಟ್ರಸ್ಟ್ ನ ಕಾರ್ಯದರ್ಶಿಯಾದ ರಘು ಅಕಮಂಚಿಯವರು ಶುಕ್ರವಾರದಂದು ಸುದ್ದಿಗೋಷ್ಠಿಯನ್ನು ನಡೆಸಿದರು.
ರಘು ಅಕಮಂಚಿಯವರು ಮಾತನಾಡಿ, ಸೇವಾ ಹಿ ಪರಮೋಧರ್ಮ ಎನ್ನುವ ಘೋಷ ವಾಕ್ಯದೊಂದಿಗೆ 1999 ರಲ್ಲಿ ಪ್ರಾರಂಭವಾದ ಸೇವಾ ಭಾರತಿ ತನ್ನ 25 ವರ್ಷಗಳನ್ನ ಪೂರೈಸುತ್ತಿದೆ. ಸಮಾಜದಲ್ಲಿ ಒಬ್ಬನೇ ಒಬ್ಬ ದುರ್ಬಲ, ಶೋಷಿತ, ವಂಚಿತ ವ್ಯಕ್ತಿಯು ಇರಬಾರದು ಆ ರೀತಿಯ ಸಮಾಜ ನಿರ್ಮಾಣ ಆ ರೀತಿಯ ಸಮಾಜ ನಿರ್ಮಾಣವಾಗಬೇಕು. ಸೇವಾ ಕಾರ್ಯದಿಂದಾಗಿ ಸಮಾಜವನ್ನು ಆತ್ಮವಿಶ್ವಾಸ ಯುಕ್ತ ಸ್ವಾಭಿಮಾನಿ ಹಾಗೂ ದೋಷರಹಿತವಾಗಿಸುವುದು ಸೇವಾ ಭಾರತೀಯ ಕನಸು.
ಸೇವಾ ಕಾರ್ಯದ ಮಾಧ್ಯಮದಿಂದ ಸಮಾಜ ಜಾಗೃತಿ, ಆ ಮುಖಾಂತರ ಸಾಮಾಜಿಕ ಪರಿವರ್ತನೆ, ಇದು ಸೇವಾ ಭಾರತೀಯ ಧ್ಯೇಯ. ಸುಶಿಕ್ಷಿತ, ಸ್ವಸ್ಥ, ಸಮೃದ್ಧ, ಸುರಕ್ಷಿತ ಹಾಗೂ ಸಾಮರಸ್ಯವುಳ್ಳ ಸಮಾಜ ನಿರ್ಮಾಣ ನಮ್ಮ ಗುರಿ. ಶಿಕ್ಷಣ, ಆರೋಗ್ಯ, ಸಂಸ್ಕಾರ, ಸ್ವಾವಲಂಬನೆ, ಸಾಮರಸ್ಯ ಈ ರೀತಿ ವಿವಿಧ ಆಯಾಮಗಳಲ್ಲಿ ಸೇವಾ ಭಾರತಿ ಟ್ರಸ್ಟ್ ಹಲವಾರು ಪ್ರಕಲ್ಪಗಳನ್ನ ನಡೆಸುತ್ತಿದೆ ಎಂದು ತಿಳಿಸಿದರು.
ನಂತರ ಈ ಹಿನ್ನಲೆಯಲ್ಲಿ ಮಾತನಾಡಿದ ಡಾ. ಸ್ಪೂರ್ತಿ ಅಂಗಡಿ ಪಾಟೀಲ್, ನಿರ್ದೇಶಕರು ಅಂಗಡಿಯ ಶಿಕ್ಷಣ ಸಂಸ್ಥೆಗಳು, ಬೆಳಗಾವಿ ಇವರು ಜನವರಿ 18-19, 2025 ರಂದು ಬೆಳಗಾವಿಯಲ್ಲಿ ಸೇವಾ ಭಾರತೀಯ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಮಾತೃ ಶಕ್ತಿ ವಂದನ ಮಾತೃ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ತರ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸುತ್ತಿರುವ ಜಾಗೃತಿ ಮಹಿಳಾ ಸ್ವಾವಲಂಬನ ಕೇಂದ್ರಗಳಲ್ಲಿ, ತರಬೇತಿ ಪಡೆಯುತ್ತಿರುವ ಮಹಿಳೆಯರು, ಫಲಾನುಭವಿಗಳು, ಮಹಿಳೆಯರ ಜಾಗೃತಿಗೋಸ್ಕರ ಕಾರ್ಯ ಮಾಡುತ್ತಿರುವ ಆಯ್ದ ಮಹಿಳಾ ಮಂಡಳಿಗಳ ಸದಸ್ಯರು ಹಾಗೂ ಸೇವಾ ಭಾರತೀಯ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹಿಳೆಯರು ಈ ಮಾತೃಸಂಗಮದಲ್ಲಿ ಭಾಗವಹಿಸಲಿದ್ದಾರೆ.
ಯಶಸ್ವಿ ಮಹಿಳೆಯರೊಂದಿಗೆ ಸಂವಾದ. ಸ್ವತಂತ್ರ ಸಂಗ್ರಾಮದ ನೇತೃತ್ವ ವಹಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಜಯಸಾಧಿಸಿದ 200ನೇ ವರ್ಷಾಚರಣೆ ಹಾಗೂ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತಿಯ ಸ್ಮರಣೆ, ಮಹಿಳಾ ಸ್ವಾವಲಂಬನ ಸಂರಕ್ಷಣೆ ಹಾಗೂ ಸಾಮಾಜಿಕ ನೇತೃತ್ವ ಕುರಿತು ಚರ್ಚೆಗಳು ಹಾಗೂ ಪ್ರತಿಭಾ ದರ್ಶನ ಕಾರ್ಯಗಳು ಮಾತ್ರ ಸಂಗಮದ ವಿಶೇಷತೆಗಳು ಎಂದು ಹೇಳಿದರು.
ಆನಂತರ ಜನವರಿ 18 ರಂದು ಸಂಜೆ 6:00 ಗಂಟೆಗೆ ಸೇವಾ ಯಾತ್ರೆ ಪ್ರದರ್ಶಿನಿ ಉದ್ಘಾಟನೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊಫೆಸರ್ ಎಸ್. ವಿದ್ಯಾಶಂಕರ ಅವರು ನಡೆಸಿಕೊಡಲಿದ್ದಾರೆ. ನಂತರ 6:30 ಗಂಟೆಗೆ ಮಾತೃ ಶಕ್ತಿ ವಂದನ ಮಾತೃಸಂಗಮದ ಉದ್ಘಾಟನೆಯನ್ನು ರಾಷ್ಟ್ರೀಯ ಸೇವಾ ಭಾರತೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರೇಣು ಪಾಠಕ್ ಮಾಡಲಿದ್ದಾರೆ. ಬೆಳಗಾವಿ ನಗರದ ಖ್ಯಾತ ಉದ್ಯಮಿಗಳಾದ ವಿವೇಕ್ ಕಮಲಾಣಿ ಉಪಸ್ಥಿತರಿರುತ್ತಾರೆ .
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖರು ವಹಿಸುತ್ತಾರೆ . ಇನ್ನು ಜನವರಿ 19 ರಂದು ಬೆಳಗ್ಗೆ 9:15 ಗಂಟೆಗೆ ಮಹಿಳಾ ಸ್ವಾವಲಂಬನ ಹಾಗೂ ಸಾಮಾಜಿಕ ನೇತೃತ್ವ ಈ ವಿಷಯ ಕುರಿತು ಚರ್ಚೆ ಹಾಗೂ ಸಂವಾದ ನಡೆಯಲಿದೆ. ಈ ಸಂವಾದ ಕಾರ್ಯಕ್ರಮದಲ್ಲಿ ಸೋಲಾಪುರದ ಉದ್ಯೋಗ ವರ್ಧಿನಿಯ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಚೌವಾನ್ ಹಾಗೂ ಬೆಂಗಳೂರಿನ ಅದಮ್ಯ ಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಬೆಳಗಾವಿ ನಗರದ ಅಂಗಡಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ. ಸ್ಪೂರ್ತಿ ಅಂಗಡಿ ಪಾಟೀಲ್ ಅವರು ವಹಿಸಲಿದ್ದಾರೆ. ಜನವರಿ19 ರಂದು ರವಿವಾರ ಬೆಳಗ್ಗೆ 10:45 ಕ್ಕೆ ಸಮಾನಾಂತರ ಗೋಷ್ಠಿಗಳು ನಡೆಯಲಿವೆ. ಮಹಿಳಾ ಸ್ವಾವಲಂಬನ ಸವಾಲುಗಳು ಅವಕಾಶಗಳು ಕುರಿತು ಜಗದೀಶ್ ನಾಯಕ್ ಅಧ್ಯಕ್ಷರು ಗ್ರಾಮವಿಕಾಸ ಸಂಸ್ಥೆ ಧಾರವಾಡ ಇವರು ಮಾರ್ಗದರ್ಶನ ನೀಡಲಿದ್ದಾರೆ. ಸಾಮಾಜಿಕ ಕಾರ್ಯ ಹಾಗೂ ಮಹಿಳಾ ನೇತೃತ್ವ ಕುರಿತು ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಹಾಗೂ ಶ್ರೀಮತಿ ಸ್ವಾತಿ ಪಾಟೀಲ್ ಪಟೇದರು ಮಾರ್ಗದರ್ಶನ ನೀಡಲಿದ್ದಾರೆ. ಸೃಜನಾತ್ಮಕ ಬೋಧನೆ ಕುರಿತು ಶ್ರೀಮತಿ ಪರಿಮಳ ವೆಂಕಟೇಶ್ ಮೂರ್ತಿ ಅವರು ತಮ್ಮ ವಿಚಾರಣೆಗಳನ್ನ ಹಂಚಿಕೊಳ್ಳಲಿದ್ದಾರೆ. ಇನ್ನು 12:30 ಗಂಟೆಗೆ ವಿಶೇಷ ಭಾಷಣ ನಡೆಯಲಿದೆ ಬೆಂಗಳೂರಿನ ಖ್ಯಾತ ಆಧ್ಯಾತ್ಮಿಕ ಚಿಂತಕರು ವಾಗ್ಮಿಗಳಾದ ಡಾ. ವಿ. ಬಿ ಆರತಿ ಅವರು ವಿಶೇಷ ಭಾಷಣಕಾರರಾಗಿ ಆಗಮಿಸಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಡಾ. ಪ್ರಭಾಕರ್ ಕೋರೆ ಕಾರ್ಯಾಧ್ಯಕ್ಷರು ಕೆ. ಎಲ್. ಇ ಸಂಸ್ಥೆ ಬೆಳಗಾವಿ ಇವರು ವಹಿಸಲಿದ್ದಾರೆ. ಶ್ರೀಮತಿ ವಿದ್ಯಾ ಮುರುಕುಂಬಿಖ್ಯಾತ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ .
ಇದಾದ ಮೇಲೆ ಮಧ್ಯಾಹ್ನ 4:00 ಗಂಟೆಗೆ ಮಾತ್ರ ಸಂಗಮದ ಸಮಾರೋಪ ಸಮಾರಂಭ ನೆರವೇರಲಿದೆ ಕೇಂದ್ರ ಮಾನ್ಯ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿಗಳಾದ ಶ್ರೀ ಗೋಪಾಲ್ ನಾಗರಕಟ್ಟೆ, ಬೆಳಗಾವಿಯ ಮಾನ್ಯ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಸಮಾರೋಹ ಸಮಿತಿಯ ಮಹಾಪೋಷಕರಾದ ಡಾ. ಪ್ರಭಾಕರ್ ಕೋರೆ ಹಾಗೂ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ವಿದ್ಯಾ ಮುರುಕುಂಬಿ ಹಾಗೂ ಸಮಾರೋಹ ಸಮಿತಿಯ ಅಧ್ಯಕ್ಷರಾದ ಬಸವರಾಜ್ ದೇಶಮುಖ ಅವರು ಭಾಗವಹಿಸಲಿದ್ದಾರೆ.
ಹೀಗಾಗಿ ಈ ಎಲ್ಲಾ ಕಾರ್ಯಕ್ರಮಗಳು ಬೆಳಗಾವಿಯ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಅನಗೋಳದಲ್ಲಿ ಜರುಗಲಿದ್ದು, ಸರ್ವರಿಗೂ ಸ್ವಾಗತ ಎಂದು ಸುದ್ದಿ ಗೋಷ್ಠಿಯಲ್ಲಿ ಹೇಳಿದರು.