ಬೆಳಗಾವಿ: ಶಿವಬಸವ ನಗರದ ಕಾರಂಜಿಮಠದಲ್ಲಿ 288ನೇ ಮಾಸಿಕ ಶಿವಾನುಭವ ಕಾರ್ಯಕ್ರಮವು ವೈಭವದಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿ, ಶರಣರ ವಚನಗಳ ಮಹತ್ವ ಮತ್ತು ಸಾಮಾಜಿಕ ಸೇವಾ ಕಾರ್ಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖ ಭಾಗವಾಗಿ ಮೂಡಲಗಿಯ ಖ್ಯಾತ ಸಾಹಿತಿ ಹಾಗೂ ದಂತ ವೈದ್ಯರಾದ ಡಾ. ಸಂಜಯ ಅ. ಶಿಂಧೆಹಟ್ಟಿ ಅವರು “ಶರಣರ ವಚನಗಳಲ್ಲಿ ಆತ್ಮವಿಮರ್ಶೆ” ಎಂಬ ವಿಷಯದ ಬಗ್ಗೆ ಆಳವಾದ ಉಪನ್ಯಾಸ ನೀಡಿದರು. ಇಂದಿನ ಸಮಾಜದಲ್ಲಿ ಆತ್ಮಾವಲೋಕನದ ಮಹತ್ವವನ್ನು ಒತ್ತಿ ಹೇಳಿದ ಅವರು, “ನಮ್ಮ ಜೀವನದಲ್ಲಿ ಆತ್ಮಾವಲೋಕನವನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಇದಕ್ಕೆ ಸ್ವಯಂ ಆತ್ಮವಿಮರ್ಶೆ ಅತ್ಯಗತ್ಯವಾಗಿದ್ದು, ಇದು ಆತ್ಮ ಸಂತೃಪ್ತಿ ಸಾಧಿಸಲು ಸಹಕಾರಿ. ಇಂತಹ ಶಿವಾನುಭವ ಗೋಷ್ಠಿಯಿಂದ ಇದು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ವ್ಯಕ್ತಿಯ ಬೆಳವಣಿಗೆಗೆ ಸಮಾಜ ಮತ್ತು ಸ್ವವಿಮರ್ಶೆ ಎರಡೂ ಮುಖ್ಯ ಎಂದು ಡಾ. ಶಿಂಧೆಹಟ್ಟಿ ಪ್ರತಿಪಾದಿಸಿದರು. “ಇದು ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ. ಬಸವಣ್ಣನವರು ‘ಸಮಾಜದಲ್ಲಿ ನಮ್ಮನ್ನು ಯಾರಾದರೂ ನೋಯಿಸಿದರೆ ಸುಮ್ಮನಿದ್ದುಬಿಡು, ಆತನ ಕರ್ಮವೇ ಅವನನ್ನು ನೋಡಿಕೊಳ್ಳುತ್ತದೆ’ ಎಂದು ಹೇಳಿದ್ದಾರೆ. ಇದು ಗಟ್ಟಿ ಮನಸ್ಸಿನ, ಸಮಾಜಮುಖಿ ವ್ಯಕ್ತಿಯಿಂದ ಮಾತ್ರ ಸಾಧ್ಯ” ಎಂದರು. ಅಲ್ಲದೆ, ಇಂದಿನ ಸಮಾಜದಲ್ಲಿ ದೈವತ್ವವು ಗುಡಿ-ಗುಂಡಾರಗಳಲ್ಲಿ ಕಲ್ಲಾಗಿದೆ, ಆದರೆ ಜನರ ಮನಸ್ಸು ರಾಕ್ಷಸ ಪ್ರವೃತ್ತಿಯದ್ದಾಗಿದೆ ಎಂದು ವಿಷಾದ ವ್ಯಕ್ತಪಡಿಸಿ, ನಮ್ಮ ದೈವತ್ವವನ್ನು ಜಾಗೃತಗೊಳಿಸಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಶರಣರು ತಮ್ಮ ವಚನಗಳಲ್ಲಿ ಇಂದಿನ ಸಮಾಜದಲ್ಲಿ ನಾವು ಹೇಗೆ ಇರಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. “ಅತ್ತಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ” ಎಂಬ ವಚನವೊಂದೇ ಅವರ ಉಕ್ತಿಗಳು ನಮ್ಮ ಸಮಾಜ ಹಾಗೂ ಮನಸ್ಸನ್ನು ತಿದ್ದಬಲ್ಲವು ಎಂಬುದಕ್ಕೆ ಸಾಕು. ಇಂದಿನ ನಮ್ಮ ನಡೆ ನುಡಿಗಳು ಬೇರೆಯಾಗಿವೆ, ಆದರೆ ಶರಣರ ನಡೆ ನುಡಿಗಳು ಒಂದೇ ಆಗಿದ್ದವು. ಆ ರೀತಿ ನಾವು ಆಗಬೇಕು. ಹಾಗಾಗಿ ಇಂತಹ ಶಿವಾನುಭವ ಗೋಷ್ಠಿಯಿಂದ ನಮ್ಮೆಲ್ಲರ ಆತ್ಮವಿಮರ್ಶೆ ಆಗಬೇಕೆಂಬುದೇ ಮೂಲ ಉದ್ದೇಶ ಎಂದು ನುಡಿದರು.
ತದನಂತರ ಕಾರ್ಯಕ್ರಮದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಎಂ.ಎಸ್. ಚೌಗಲಾ ಹಾಗೂ ವೈಜಯಂತಿ ಎಂ. ಚೌಗಲಾ ದಂಪತಿಗಳನ್ನ ಅವರ ಅಮೃತ ಮಹೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎಸ್. ಚೌಗಲಾ, ತಮ್ಮ ಮತ್ತು ತಮ್ಮ ಶ್ರೀಮತಿಯವರ ಪ್ರೇಮವಿವಾಹದ ಕುರಿತು ಸ್ಮರಿಸಿದರು. ಭಾರತ ಸೇವಾ ಸಂಸ್ಥೆಯಲ್ಲಿ ಕ್ಯಾಂಪ್ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸುವ ಕೆಲಸ ಮಾಡುತ್ತಿದ್ದ ತಮ್ಮ ಅನುಭವವನ್ನು ಹಂಚಿಕೊಂಡರು. ನಂತರ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಅವರ ಶ್ರೀಮತಿಯವರು ಸಹ ನೆಹರೂ ಯುವ ಕೇಂದ್ರದಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿದ್ದರು. ಹೀಗೆ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ತಮಗೆ 1977 ರಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯನ್ನು ಸ್ಥಾಪಿಸುವ ಪರಿಕಲ್ಪನೆ ಬಂತು ಎಂದು ಹೇಳಿದರು.
“ಇದು ನೊಂದ ಹೆಣ್ಣು ಮಕ್ಕಳಿಗೆ ಸಾಂತ್ವನ ನೀಡುವ ಸಲುವಾಗಿ ಸ್ಥಾಪಿತವಾದ ಸಂಸ್ಥೆ. ಆಗ ಚಿಕ್ಕ ಅಂಗನವಾಡಿಯಿಂದ ಶುರುವಾದ ಸಂಸ್ಥೆ, ಈಗ ಬೃಹತ್ ಆಲದ ಮರವಾಗಿ ಬೆಳೆದಿದೆ” ಎಂದು ಚೌಗಲಾ ಸಂಸ್ಥೆಯ ಬೆಳವಣಿಗೆಯನ್ನು ವಿವರಿಸಿದರು. ತಮ್ಮ ಸಂಸ್ಥೆಯು ಕೌಟುಂಬಿಕ ಕಲಹ, ಸಾಂತ್ವನ, ಅಂಗನವಾಡಿ, ಉಜ್ವಲ ವಸತಿ ನಿಲಯ, ಆಶ್ರಯ ಸ್ವಾಧಾರ ಗೃಹ, ನಮ್ಮೂರ ಬಾನುಲಿ ರೇಡಿಯೋ ಹಾಗೂ ನಾಗನೂರು ಸ್ವಾಮಿಗಳ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮವನ್ನು ದೇವರಾಜ ಅರಸ ಕಾಲೋನಿಯಲ್ಲಿ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಇನ್ನೂ ಕೆಲವೇ ವರ್ಷಗಳಲ್ಲಿ ತಮ್ಮ ಸಂಸ್ಥೆ ತನ್ನ ಸುದೀರ್ಘ 50 ವರ್ಷಗಳನ್ನು ಪೂರೈಸಲಿದೆ. ಆದರೆ ಯಾವುದೇ ರೀತಿಯ ಹಣವನ್ನು ಸಂಸ್ಥೆ ತೆಗೆದುಕೊಳ್ಳುವುದಿಲ್ಲ. “ಸಮಾಜದಿಂದ ಬೆಳೆದ ನಾವು ಸಮಾಜಕ್ಕಾಗಿಯೇ ಕೆಲಸ ಮಾಡುತ್ತಿದ್ದೇವೆ” ಎಂದು ಚೌಗಲಾ ನುಡಿದರು. ನಾಗನೂರು ಸ್ವಾಮಿಗಳ ಸಹಾಯ ಪಡೆದು ಇಂದು ಅವರ ಆಶೀರ್ವಾದದಿಂದಲೇ ಸನ್ಮಾನ ಸ್ವೀಕರಿಸುತ್ತಿದ್ದೇವೆ, ಇದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ, ಕಾರಂಜಿಮಠದ ಶ್ರೀ ಮ.ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಪ್ರೊ. ಹೇಮಾ ಸೊನ್ನೊಳಿ, ಡಾ. ಸಂಜಯ ಅ. ಶಿಂಧೆಹಟ್ಟಿ, ಶ್ರೀ ಕಾರಂಜಿಮಠದ ಕುಮಾರೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿನಿಯರು, ಸದ್ಭಕ್ತರು, ಶರಣ ಶರಣೆಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಎ.ಕೆ.ಪಾಟೀಲ ನೆರವೆರಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143