ಹುಬ್ಬಳ್ಳಿ: ನನ್ನ ಗೆಳತಿ ನನ್ನ ಗೆಳತಿ, ನನ್ನ ನೋಡಿ ನೀ ನಗತಿ ಹಾಡಿನ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾಗಿದ್ದ, ಕನ್ನಡಿಗರ ಹೃದಯ ಗೆದ್ದಿದ್ದ ಮಂಜುನಾಥ್ ಸಂಗಳದ ನಿಧನರಾಗಿದ್ದಾರೆ.
ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ವಾಸವಾಗಿದ್ದ ಮಂಜುನಾಥ್ ಸಂಗಳದ್ ಅವರಿಗೆ ನಿನ್ನೆ ಎದೆನೋವು ಕಾಣಿಸಿಕೊಂಡಿತ್ತು. ಆ ನಂತರ ಅವರನ್ನು ಕೂಡಲೇ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಮಂಜುನಾಥ್ ಸಂಗಳದ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಮಂಜುನಾಥ್ ಸಂಗಳದ ಅವರ ಅಕಾಲಿಕ ನಿಧನದಿಂದ ಇವರ ಹಾಡುಗಳನ್ನು ಇಷ್ಟಪಡುತ್ತಿದ್ದ ಅಭಿಮಾನಿಗಳು ಮತ್ತು ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು,ಮಂಜುನಾಥ್ ಸಂಗಳದ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೆಲವು ದಿನಗಳ ಹಿಂದೆ ಎಪಿಎಂಸಿ ಚುನಾವಣೆಯ ಹಿನ್ನೆಲೆ ಓಡಾಡಿಕೊಂಡಿದ್ದ ಮಂಜುನಾಥ್ ಸಂಗಳದ ನನ್ನ ಗೆಳತಿ ನನ್ನ ಗೆಳತಿ, ನನ್ನ ನೋಡಿ ನೀ ನಗತಿ ಹಾಡಿನ ಮೂಲಕ ಜನಪ್ರಿಯರಾಗಿದ್ದರು. ಅದಕ್ಕೂ ಮುನ್ನ ಭಜನೆ ಹಾಡುಗಳನ್ನು ಹಾಡುತ್ತಿದ್ದ ಮಂಜುನಾಥ್ ಸಂಗಳದ ನನ್ನ ಗೆಳತಿ ಹಾಡಿನ ಯಶಸ್ವಿನ ನಂತರ ಹಲವು ಹಾಡುಗಳನ್ನು ಹಾಡಿದ್ದರು.
ಇನ್ನು ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ಹಾಡು ಬರೆಯಲು ನನ್ನ ಗೆಳೆಯನ ಲವ್ ಸ್ಟೋರಿ ಕಾರಣವೆಂದು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಂಜುನಾಥ್ ಸಂಗಳದ ಹೇಳಿಕೊಂಡಿದ್ದರು.
ಊರಿನ ಜಾತ್ರೆಯಲ್ಲಿ ನಡೆದ ಘಟನೆಯಿಂದ ಹಾಡನ್ನು ಬರೆದಿದ್ದಾಗಿ ಹೇಳಿದ್ದ ಮಂಜುನಾಥ್ ಆ ನಂತರ ತಮ್ಮ ಪರವಾನಗಿ ಇಲ್ಲದೇ ಅನೇಕರು ಹಾಡು ಮತ್ತು ಟ್ಯೂನ್ ಕಾಪಿ ಮಾಡಿದ್ದಕ್ಕೆ ಬೇಸರವನ್ನು ಕೂಡ ಮಾಡಿಕೊಂಡಿದ್ದರು. ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.