ಮೈಸೂರು: 50 ಅಡಿ ರಸ್ತೆಯನ್ನು ನೂರಡಿ ರಸ್ತೆ ಮಾಡುವ ಉದ್ದೇಶದಿಂದ 50 ವರ್ಷದಿಂದ ಹಸಿರಾಗಿದ್ದ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ಕೊಡಲಾಗಿದೆ. ಹೈದರಾಲಿ ರಸ್ತೆಯ ಕಾಳಿಕಾಂಬ ದೇವಸ್ಥಾನದಿಂದ ಎಸ್‌ಪಿ ವೃತ್ತದವರೆಗೆ ಅಷ್ಟಾಗಿ ಸಂಚಾರ ದಟ್ಟಣೆ ಇರಲಿಲ್ಲ. ಅಲ್ಲದೆ, ಈ ರಸ್ತೆ ಸರಣಿ ಅಪಘಾತ ಸಂಭವಿಸುವ ಬ್ಲ್ಯಾಕ್ ಸ್ಪಾಟ್ ಕೂಡ ಆಗಿರಲಿಲ್ಲ. ಇಲ್ಲಿ ಮರ ಕಡಿದು ರಸ್ತೆ ಅಗಲೀಕರಣ ಮಾಡುವ ಅವಶ್ಯಕತೆಯೇ ಇರಲಿಲ್ಲ. 2019ರಲ್ಲೂ ರಸ್ತೆ ವಿಸ್ತರಣೆಗೆ ಪಾಲಿಕೆ ಮುಂದಾಗಿತ್ತು. ಸಾರ್ವಜನಿಕರ ವಿರೋಧದಿಂದ ಹಿಂದಕ್ಕೆ ಸರಿದಿತ್ತು. ಇದೀಗ ರಾತ್ರೋರಾತ್ರಿ ಮರಗಳನ್ನು ಕಡಿಯಲಾಗಿದೆ. ಬಲಿಯಾದ ಮರಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವೃತ್ತದ ಬಳಿ ಏ. 18ರಂದು ಮೇಣದ ಬತ್ತಿ ಹಚ್ಚಿ ಭಾವಪೂರ್ಣವಾಗಿ ಶ್ರದ್ದಾಂಜಲಿ ಸಲ್ಲಿಸಲಾಗುವುದು. ಬಳಿಕ 11ನೇ ದಿನದ ತಿಥಿ ಕಾರ್ಯವನ್ನೂ ನಡೆಸಲು ಪರಿಸರ ಸಂಘ-ಸಂಸ್ಥೆಗಳು ತೀರ್ಮಾನಿಸಿವೆ. ಹೈದರಾಲಿ ರಸ್ತೆಯಲ್ಲಿ ಪ್ರತಿನಿತ್ಯ ತಿರುಗಾಡುವ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪರಿಸರವಾದಿ ಹಾಗೂ ಬರಹಗಾರ್ತಿ ಕುಸುಮಾ ಅಯರಹಳ್ಳಿ ಮಾತನಾಡಿ, ಮೈಸೂರು ನಗರದಲ್ಲಿ ಈ ಕೃತ್ಯವನ್ನು ನೋಡಿರುವ ನತದೃಷ್ಟರು ನಾವು. 50ಕ್ಕೂ ಹೆಚ್ಚಿನ ಮರಗಳನ್ನು ಕಡಿಯಬೇಕಾದರೆ, ಸಾರ್ವಜನಿಕರ ಅಭಿಪ್ರಾಯ ಮತ್ತು ಅನುಮತಿ ಪಡೆಯಬೇಕೆಂಬ ನಿಯಮ ಇದೆ. ಇದನ್ನು ಅರಿತ ದುಷ್ಟ ಅಧಿಕಾರಿಗಳು ಜಾಣೆ ಉಪಯೋಗಿಸಿ 40 ಮರಗಳನ್ನು ಕತ್ತರಿಸಿದ್ದಾರೆ. ಅವರು ಈ ದುಷ್ಟತನವನ್ನು ಇನ್ನೊಂದು ಬಾರಿ ತೋರಿಸದಂತೆ ದೊಡ್ಡ ಮಟ್ಟದ ಬಿಸಿ ಮುಟ್ಟಿಸುವ ರೀತಿಯಲ್ಲಿ ಪ್ರತಿಭಟಿಸಬೇಕು ಎಂದು ಹರಿಹಾಯ್ದರು.
ರಸ್ತೆ ಅಗಲೀಕರಣ ಮಾಡಬೇಕೆಂದಿರುವ ರಸ್ತೆಯ ಒಂದು ಭಾಗದಲ್ಲಿ, ಮೃಗಾಲಯವಿದೆ. ಇನ್ನೊಂದು ಬದಿಯಲ್ಲಿ ಕಾರಂಜಿ ಕೆರೆಯಿದೆ. ಇವೆರಡು ಸೂಕ್ತ ಜಾಗಗಳು ಹಾಗೂ ಪರಿಸರ ಜೀವವೈವಿಧ್ಯತೆಯಿರುವ ಸ್ಥಳಗಳು. ಇಂತಹ ಸ್ಥಳಗಳಲ್ಲಿ ರಸ್ತೆ ಅಗಲೀಕರಣ ಮಾಡುವುದು ತಪ್ಪು.
ಇಂತಹ ಸ್ಥಳಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೆ, ನ್ಯಾಯಾಲಯದ ಕೆಲವು ನೀತಿ ನಿಯಮಗಳಿವೆ. ಅವುಗಳನ್ನು ಮೀರಿ ನಿಯಮಗಳನ್ನು ಗಾಳಿಗೆ ತೂರಿ ಮರಗಳನ್ನು ರಾತ್ರೋರಾತ್ರಿ ಕತ್ತರಿಸಿರುವುದು ಪಾಪ ಕೃತ್ಯ. ಈ ತಪ್ಪಿಗೆ ಅಧಿಕಾರಿಗಳಿಗೆ ಕಾನೂನಾತ್ಮಕವಾಗಿ ತಕ್ಕ ಶಿಕ್ಷೆಯಾಗಬೇಕು ಎಂದರು.
ಹೋರಾಟ ಸಮಿತಿ ರಚನೆ:
ಮುಂದೆ ಮೈಸೂರಿನಲ್ಲಿ ಈ ರೀತಿಯ ಮರಗಳ ಹನನ ನಡೆಯಬಾರದು. ಮರಗಳ ಸಂರಕ್ಷಣೆ ಆಗಬೇಕೆಂಬ ಉದ್ದೇಶದಿಂದ ಮೈಸೂರಿನ 12ರಿಂದ 13 ಸಂಘಟನೆಗಳ ಪ್ರತಿನಿಧಿಗಳು ಸೇರಿ ಹೋರಾಟ ಸಮಿತಿ ರಚನೆ ಮಾಡಿದ್ದಾರೆ. ಪರಿಸರ ಬಳಗ, ಲೆಟ್ಸ್ ಡು ಇಟ್, ಮೈಸೂರು ಗ್ರಾಹಕರ ಪರಿಷತ್, ಯೂತ್ ಫಾರ್ ಸೇವಾ, ಕ್ಲೀನ್ ಮೈಸೂರು ಫೌಂಡೇಶನ್, ಯುವ ಬ್ರಿಗೇಡ್, ಮೈಸೂರು ಮೀಮ್ಸ್, ಆರ್ಯವೈಶ್ಯ ಅಭಿವೃದ್ಧಿ ಸಮಿತಿ, ಸಮಾಜ ರಕ್ಷಣಾ ಸೇನೆ, ಮೈಸೂರು ಹೃದಯವಂತ ಕನ್ನಡಿಗರ ಸಂಘ ಸೇರಿದಂತೆ ಹೋರಾಟ ಸಮಿತಿ ರಚನೆ ಮಾಡಲಾಗಿದೆ.
ಹಾಗಾಗಿ, ಏ.17ರಂದು ವಿವಿಧ ಸಂಘಟನೆಗಳ ಜೊತೆ ಗೂಡಿ ಮರಗಳನ್ನು ಕಡಿದ ಸ್ಥಳಗಳಲ್ಲಿ ಸಾವಿ ರಾರು ಜನ ಸೇರಿಸಿ ಮೊಂಬತ್ತಿ ಹಿಡಿದು ಧರೆ ಗುರುಳಿದ ಮರಗಳಿಗಾಗಿ ಶೋಕಾಚರಣೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಏ.18 ರಂದು ನಗರಪಾಲಿಕೆ, ಜಿಲ್ಲಾಧಿಕಾರಿ ಕಚೇರಿ, ಅರಣ್ಯ ಇಲಾಖೆಯಗಳ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ವೆಳೆ, ಲೆಟ್ಸ್ ಡೂ ಇಟ್ ಸಂಸ್ಥೆಯ ಬಿ. ಎಸ್.ಪ್ರಶಾಂತ್, ನಿವೃತ್ತ ಮೇಜರ್ ಜನರಲ್ ಒಂಬತ್ತೆರೆ, ಪ್ರೊ.ಕಾಳಚನ್ನೇಗೌಡ, ಮನ್ಸೂರ್ ಫಯಾಜ್, ಯೂತ್ ಫಾರ್ ಸೇವಾ ಉದಿತ್ಗೌಡ, ಎಂಜಿಪಿ ವಿಶ್ವನಾಥ್, ಪರಿಸರ ಬಳಗದ ಪರತುರಾಮೇಗೌಡ, ಭಾಗ್ಯಶಂಕರ್, ಕುಸುಮ ಆಯರಹಳ್ಳಿ, ಪ್ರಭಾ ನಂದೀಶ್, ಶೈಲಜೇಶ, ಗಂಟಯ್ಯ, ಕ್ಲೀನ್ ಮೈಸೂರು ಫೌಂಡೇಷನ್ ಲೀಲಾ ಶಿವಕುಮಾರ್, ಸಿಂಧುವಳ್ಳಿ ಅಕ್ಟರ್, ಗೋಕುಲ, ಮಂಜುನಾಥ, ಡಿ.ಪಿ. ಪರಮೇಶ್, ವೆಂಕಟೇಶ್, ರಾಮ್ ಪ್ರಸಾದ್, ಮನೋಹರ , ಗೋವಿತ್ ಕಿರಣ್ ಸೇರಿದಂತೆ 110ಕ್ಕೂ ಹೆಚ್ಚು ಜನರು ತುರ್ತುಸಭೆಯಲ್ಲಿ ಭಾಗವಹಿಸಿದ್ದರು.