ಗೋಕಾಕ: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಂದಿಭೂಷಿತ ಕಪ್ಪತ ಜ್ಯೋತಿಯ ವಾಹನವು ಸರ್ವಾಲಂಕೃತವಾಗಿ ಇಂದು ಮಧ್ಯಾಹ್ನ 12-30 ಕ್ಕೆ ಹೊರಟು ನಾಲ್ಕು ಘಂಟೆಗೆ ಕಿತ್ತೂರ ತಾಲೂಕಿನ ನಿಚ್ಚಣಿಕಿ ಗ್ರಾಮ ತಲುಪಿದೆ.
ಕೊಣ್ಣೂರ ಗ್ರಾಮದ ಸುರೇಶ ಕುಂಬಾರ ಮತ್ತು ಜಗದೀಶ ತೇಲಿ ಹಾಗೂ ಗುರು ಹಿರಿಯರು ತುಂಬಾ ಶ್ರಮವಹಿಸಿ ಪುಣೆ ಯಿಂದ ಜೋಡು ನಂದಿಗಳನ್ನು ತಂದು ಸಿದ್ಧಗೊಳಿಸುತ್ತಿದ್ದು, ಅವರ ಶ್ರದ್ಧಾ ಭಕ್ತಿಯು ಸ್ತುತ್ಯಾರ್ಹವಾಗಿದ್ದು, ಶ್ರೀ ನಂದಿವೇರಿ ಮಠದ ಪರವಾಗಿ ಅವರೆಲ್ಲರಿಗೆ ಶುಭ ಹಾರೈಕೆ ಗಳನ್ನು ಸಲ್ಲಿಸಲಾಗುತ್ತಿದೆ.
ನಿಚ್ಚಣಿಕಿ ಗ್ರಾಮದ ಗುರು ಹಿರಿಯರು ಮತ್ತು ಸದ್ಭಕ್ತರು ಇಂದು ಸಾಯಂಕಾಲ ನಾಲ್ಕು ಘಂಟೆಗೆ ಶ್ರದ್ಧಾ ಭಕ್ತಿಗಳಿಂದ ಜ್ಯೋತಿಯನ್ನು ನಿಚ್ವಣಿಕಿಯಲ್ಲಿ ಸ್ವಾಗತಿಸಿದರು. ಸಂಜೆ ಜರುಗಲಿರುವ ಪೂರ್ವಭಾವಿ ಸಿದ್ಧತಾ ಸಭೆಯ ಸಾನಿಧ್ಯವನ್ನು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳು ವಹಿಸಲಿದ್ದರು. ಕಿತ್ತೂರಿನ ಕಲ್ಮಠದ ಪೂಜ್ಯರು ಉಪಸ್ಥಿತರಿರದ್ದರು.
ನಾಳೆ ಸೋಮವಾರ ಜ. 27, 2025 ರಂದು ಬೆಳಿಗ್ಗೆ 9-00 ಘಂಟೆಗೆ ಕಿತ್ತೂರು ಚನ್ನಮ್ಮನ ಕೋಟೆಯ ಮುಂಭಾಗದಿಂದ ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆಯು ದೀಪ ಪ್ರಜ್ವಲನದೊಂದಿಗೆ ಶುಭಾರಂಭಗೊಳ್ಳಲಿದೆ. ನಂತರ ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಿ ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಜ್ಯೋತಿಯು ಪ್ರಯಾಣ ಬೆಳೆಸುವುದು.
ಪೂರ್ವಾಹ್ನ 11-00 ಘಂಟೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲರು ವಿಶ್ವವಿದ್ಯಾಲಯದ ಸಿಬ್ಬಂದಿಯೊಂದಿಗೆ ಜ್ಯೋತಿಯನ್ನು ಸ್ವಾಗತಿಸುವರು. ವಿಶ್ವವಿದ್ಯಾಲಯದ ನಂದಿ ಕೊಟ್ಟಿಗೆಯಲ್ಲಿರುವ ನಂದಿಗಳಿಗೆ ಪೂಜೆ ಸಲ್ಲಿಸಿದ ನಂತರ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಜ್ಯೋತಿಯು ಪ್ರಯಾಣ ಬೆಳೆಸುವುದು.
ಧಾರವಾಡದ ಮುರುಘಾಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ನಂದಿ ಕೃಷಿ ಸಂಕಲ್ಪ ಯಾತ್ರೆಯ ಪ್ರಥಮ ವೇದಿಕೆ ಕಾರ್ಯಕ್ರಮ ಜರುಗುವುದು.
ಶಂಕರ ಹಲಗತ್ತಿ, ಶಂಕರ ಕುಂಬಿ, ಭಾಲಚಂದ್ರ ಜಾಬಶೆಟ್ಟಿ, ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಭೋಜನಾ ನಂತರ ಮಧ್ಯಾಹ್ನ 3-00 ಘಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಹೊರಟು ಧಾರವಾಡ ಪ್ರದಕ್ಷಿಣೆ ಮೂಲಕ ಹುಬ್ಬಳ್ಳಿಯ ನವನಗರಕ್ಕೆ ತಲುಪುವುದು.
ನವನಗರದ ಗುರು ಹಿರಿಯರು ಹಾಗೂ ಸದ್ಭಕ್ತರ ನೇತೃತ್ವದಲ್ಲಿ ಜ್ಯೋತಿಯ ಪುರಪ್ರವೇಶ, ನಗರ ಫ್ರದಕ್ಷಿಣೆ ಮೂಲಕ ಈಶ್ವರ ದೇವಸ್ಥಾನ ತಲುಪುವುದು. ಸಂಜೆ ಆರು ಗಂಟೆಯಿಂದ ಎಂಟು ಘಂಟೆಯ ವರೆಗೆ ನಂದಿ ಕೃಷಿ ಸಂಕಲ್ಪ ಯಾತ್ರೆಯ ದ್ವಿತೀಯ ವೇದಿಕೆ ಕಾರ್ಯಕ್ರಮ ಜರುಗುವುದು.
ಮಹಾ ಪ್ರಸಾದದ ನಂತರ ನವನಗರದಲ್ಲಿ ವಾಸ್ತವ್ಯ.
ನವನಗರದ ಸಕಲ ವ್ಯವಸ್ಥಾಪನ ಜವಾಬ್ದಾರಿಯನ್ನು ಸಂಗಮೇಶ ಹೊರಗಿನಮಠ, ಬಿ.ಕೆ.ಪಾಟೀಲ ಹಾಗೂ ಶಂಕರ ಗುರವ ಹಾಗೂ ಸದ್ಭಕ್ತರು ವಹಿಸಲಿದ್ದಾರೆ. ನಾಡಿದ್ದು ಮಂಗಳವಾರ ಜ. 28, 2025 ರಂದು ಬೆಳಿಗ್ಗೆ 8-00 ಘಂಟೆಗೆ ನವನಗರದಿಂದ ಹುಬ್ಬಳ್ಳಿಯ ಲಿಂಗರಾಜನಗರ ಸಮುದಾಯ ಭವನಕ್ಕೆ (ಉತ್ತರ) ಪ್ರಯಾಣ.
ಬೆಳಿಗ್ಗೆ 9-00 ಘಂಟೆಗೆ ಲಿಂಗರಾಜ ನಗರದ ಗುರು ಹಿರಿಯರು, ಮಹಿಳಾ ಮಂಡಳಿಗಳು ಹಾಗು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ. ನಂದಿಭೂಷಿತ ಕಪ್ಪತ ಜ್ಯೋತಿಯ ಪೂಜೆಯ ನಂತರ ಲಿಂಗರಾಜನಗರದಿಂದ ಹೊರಟು ಹುಬ್ಬಳ್ಳಿಯ ಪ್ರದಕ್ಷಿಣೆ ನಂತರ ಪೂರ್ವಾಹ್ನ 11-30 ಕ್ಕೆ ಗದಗಿನಲ್ಲಿರುವ ನಂದಿವೇರಿ ಸಂಸ್ಥಾನ ಮಠಕ್ಕೆ ಆಗಮನ,
ಪೂಜೆ ಸಲ್ಲಿಸಿದ ನಂತರ ಗದಗ ನಗರ ಪ್ರದಕ್ಷಿಣೆ ಮೂಲಕ ಡೋಣಿಗೆ 1-00 ಘಂಟೆಗೆ ಆಗಮನ. ಡೋಣಿ ಪ್ರದಕ್ಷಿಣೆ ನಂತರ ಮಧ್ಯಾಹ್ನ ಎರಡು ಘಂಟೆಗೆ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠಕ್ಕೆ ಆಗಮನ ಮಧ್ಯಾಹ್ನ ಎರಡರಿಂದ ಮೂರು ಘಂಟೆಯ ವರೆಗೆ ತೀರ್ಥ ಪ್ರೋಕ್ಷಣೆ, ನಂದಿವೇರಿ ಬಸವಣ್ಣನ ದರ್ಶನ, ಮಹಾಪ್ರಸಾದ ಸೇವನೆ. ನಂತರ ನಂದಿಕೃಷಿ ಸಂಕಲ್ಪ ಹಾಗೂ ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆಯ ಮಂಗಲ ಕಾರ್ಯಕ್ರಮ,
ಸದರಿ ಕಾರ್ಯಕ್ರಮ ದಲ್ಲಿ ಸನ್ಮಾನ್ಯ ಎಚ್.ಕೆ.ಪಾಟೀಲರು, ಗೌರವಾನ್ವಿತ ಸಚಿವರು, ಕರ್ನಾಟಕ ಸರಕಾರ, ಸನ್ಮಾನ್ಯ ಜಿ.ಎಸ್.ಪಾಟೀಲರು, ಶಾಸಕರು, ಗುರುನಾಥಗೌಡ ಓದುಗೌಡರ, ರುದ್ರಣ್ಣ ಗುಳಗುಳಿ, ದೇವರಡ್ಡಿ ಅಗಸನಕೊಪ್ಪ, ಭಾಲಚಂದ್ರ ಜಾಬಶೆಟ್ಟಿ ಹಾಗೂ ಡೋಣಿ, ಸೊರಟೂರ, ಹೈತಾಪುರ, ಗದಗ, ಹುಬ್ಬಳ್ಳಿ, ಧಾರವಾಡ, ನಿಚ್ಚಣಿಕಿ, ಕಿತ್ತೂರು ಹಾಗೂ ಹತ್ತು ಹಲವು ಗ್ರಾಮಗಳಿಂದ ಸದ್ಭಕ್ತರು ಮತ್ತು ಪರಿಸರಾಸಕ್ತರು ಭಾಗವಹಿಸಲಿದ್ದಾರೆ.
ಸದರೀ ಕಾರ್ಯವನ್ನು ಅನುಷ್ಠಾನಗೊಳಿಸಲು ಡೋಣಿ ಗ್ರಾಮದ ಗುರು ಹಿರಿಯರು, ಯುವಕರು ಹಾಗೂ ಸದ್ಭಕ್ತರು ಸನ್ನದ್ಧರಾಗಿದ್ದಾರೆ. ಜ. 27, 2025 ರಂದು ತಮ್ಮ ಸ್ವಂತ ವಾಹನದಲ್ಲಿ ಜ್ಯೋತಿ ಯಾತ್ರೆಯಲ್ಲಿ ಭಾಗವಹಿಸಲಿಚ್ಚಿಸಿರುವವರು, ತಮ್ಮ ವಾಹನ ಸಂಖ್ಯೆ ಹಾಗು ಭಾಗವಹಿಸಲಿರುವವರ ಹೆಸರುಗಳನ್ನು ಹೊಂದಿರುವ ಯಾದಿಯನ್ನು ಹಾಗೂ ಜ. 27, 2025 ರಂದು ನವನಗರದಲ್ಲಿ ಕಲ್ಪಿಸಲಾಗುತ್ತಿರುವ ವಸತಿ ವ್ಯವಸ್ಥೆಯನ್ನು ಬಯಸುವವರು ಭಾಲಚಂದ್ರ ಜಾಬಶೆಟ್ಟಿ ಇವರ ಮೋಬೈಲ್ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.
ಭಾಲಚಂದ್ರ ಜಾಬಶೆಟ್ಟಿ
9741888365