ಬೆಳಗಾವಿ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಶಹಾಪುರ ಸೇವಾಕೇಂದ್ರದಲ್ಲಿ ಜುಲೈ 6, 2025, ಭಾನುವಾರದಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಗಣ್ಯರು ಭಾಗವಹಿಸಿ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯ ಹೆಚ್.ಓ.ಡಿ. ಡಾ. ಕೆ. ಎನ್. ಹುಲಿಕಟ್ಟಿ ಅವರು ಮಾತನಾಡಿ, “ಶಾರೀರಕ ರೋಗಗಳನ್ನು ನಾವು ನಿವಾರಿಸುತ್ತೇವೆ, ಆದರೆ ಕಾಮ, ಕ್ರೋಧದಂತಹ ಮಾನಸಿಕ ರೋಗಗಳನ್ನು ನಿವಾರಿಸಲು ಆಧ್ಯಾತ್ಮ ಮತ್ತು ಧ್ಯಾನ ಒಂದೇ ಉಪಾಯ” ಎಂದು ಹೇಳಿದರು.
ರೂರಲ್ ಆಯುರ್ವೇದ ಆಸ್ಪತ್ರೆ, ಆಟೋ ನಗರ, ಬೆಳಗಾವಿಯ ಪ್ರಾಂಶುಪಾಲರಾದ ಡಾ. ಉಜ್ವಲಾ ದೇಶಪಾಂಡೆ ಅವರು, “ರೋಗಿಗಳು ಯಾವ ಸಮಯಕ್ಕೆ ಬಂದರೂ ಅವರಿಗೆ ಸೇವೆ ನೀಡಲು ನಾವು ಸಿದ್ಧರಿರಬೇಕು. ರೋಗಿಗಳು ಗುಣಮುಖರಾದಾಗಲೇ ನಮಗೆ ನಿಜವಾದ ಆನಂದವಾಗುತ್ತದೆ” ಎಂದು ನುಡಿದರು.
ಖಾಸಬಾಗದ ಖಾಸಗಿ ವೈದ್ಯರಾದ ಡಾ. ಉಲ್ಹಾಸ ಯಡೂರ ಅವರು, ಆಂತರಿಕ ಮತ್ತು ಬಾಹ್ಯ ಶುದ್ಧಿಯಿಂದ ರೋಗಗಳು ದೂರವಾಗುತ್ತವೆ ಎಂದು ಒತ್ತಿ ಹೇಳಿದರು. ಕೆ.ಎಲ್.ಇ. ಆಸ್ಪತ್ರೆಯ ಸಿ.ಎಂ.ಓ. ಡಾ. ಗಿರೀಶ ಯಡೂರ ಅವರು, ಪರಿಸರ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣದಿಂದ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದರು. ಅಲ್ಲದೆ, ಪ್ರತಿಯೊಬ್ಬರೂ ತಮ್ಮ ಕಾರ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕೆಂದು ಕರೆ ನೀಡಿದರು.
ಕೆ.ಎಲ್.ಇ. ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಸೌಮ್ಯ ವರ್ಣೇಕರ್ ಅವರು, ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡುವ ಮಹತ್ವವನ್ನು ಪ್ರತಿಪಾದಿಸಿದರು. ಪರೀಕ್ಷಾ ಸಮಯದಲ್ಲಿ ಮಾತ್ರ ಭಕ್ತಿ ಮಾಡುವ ಬದಲು ನಿರಂತರ ಭಕ್ತಿಭಾವನೆ ಇರುವುದು ಅವಶ್ಯಕ ಎಂದು ತಿಳಿಸಿದರು.
ಬೆಳಗಾವಿಯ ಶೇಖ್ ಹೋಮಿಯೋಪತಿ ಕಾಲೇಜಿನ ಪ್ರೊಫೆಸರ್ ಡಾ. ಸಂಗೀತಾ ಅವರು, ಹೃದಯ ಸಂಬಂಧಿತ ರೋಗಗಳನ್ನು ಗುಣಪಡಿಸಲು ಬ್ರಹ್ಮಾಕುಮಾರಿ ಸಂಸ್ಥೆ ಕಲಿಸುವ ರಾಜಯೋಗ ಧ್ಯಾನ, ವ್ಯಾಯಾಮ ಮತ್ತು ಆಹಾರ ಪದ್ಧತಿ ಸಹಕಾರಿಯಾಗಿದೆ ಎಂದರು. ಇಂತಹ ಸಂಶೋಧನೆಗಳು ಮೌಂಟ್ ಅಬುವಿನಲ್ಲಿರುವ ವೈದ್ಯಕೀಯ ವಿಭಾಗದಿಂದ ನಡೆಯುತ್ತವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾಕುಮಾರಿ ಮೀನಾಕ್ಷೀ ಅಕ್ಕನವರು ಮಾತನಾಡಿ, “ವೈದ್ಯರ ನಗುಮುಖ ನೋಡಿದಾಗಲೇ ರೋಗಿಯ ಅರ್ಧ ರೋಗ ದೂರವಾಗುತ್ತದೆ. ವೈದ್ಯನಾಥನಾದ ಪರಮಾತ್ಮ ಶಿವನು ಇಲ್ಲಿ ಕಲಿಸಿಕೊಡುತ್ತಿರುವ ರಾಜಯೋಗವು ಸರ್ವರೋಗಗಳಿಂದ ಮುಕ್ತವಾಗುವ ದಿವ್ಯ ಔಷಧಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ರಾಜಯೋಗಿನಿ ಬ್ರಹ್ಮಾಕುಮಾರಿ ವಿದ್ಯಾ ಅಕ್ಕನವರು ಮಾತನಾಡಿ, “ಇಂದಿನ ರೋಗಿಗಳು ಮಾನಸಿಕವಾಗಿಯೂ ದುರ್ಬಲರಾಗಿರುತ್ತಾರೆ. ಔಷಧದ ಜೊತೆಗೆ ಮಾನಸಿಕ ಬಲ ಹೆಚ್ಚಿಸಲು ಧ್ಯಾನ ಅವಶ್ಯಕವಾಗಿದೆ. ಇದರಿಂದ ರೋಗಿಯು ಗುಣಮುಖರಾಗುವುದಲ್ಲದೆ, ಆನಂದದಿಂದ ಜೀವನ ನಡೆಸಬಹುದಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ಈಶ್ವರೀಯ ಪ್ರಸಾದ ಕಾಣಿಕೆ ನೀಡಲಾಯಿತು. ರಾಜಯೋಗಿನಿ ವಿದ್ಯಾ ಅವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಬಿ.ಕೆ. ದತ್ತಾತ್ರೇಯ ವಂದನಾರ್ಪಣೆ ಮಾಡಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143