ಬೆಳಗಾವಿ:ಪಿಯುಸಿ ಹಂತವನ್ನು ಯಶಸ್ವಿಯಾಗಿ ಮುಗಿಸಿ ಕಾಲೇಜು ಮೆಟ್ಟಿಲೇರಿರುವ ವಿದ್ಯಾರ್ಥಿಗಳು ಭವಿಷ್ಯದ ಆಯ್ಕೆಯ ವಿಷಯದಲ್ಲಿ ತಂದೆ-ತಾಯಿ, ಗುರು ಹಿರಿಯರು, ಬಂಧು ಬಾಂಧವರು ಸೇರಿದಂತೆ ಸ್ನೇಹಿತರ ಮೇಲೆ ಅವಲಂಬನೆ ಯಾಗದೆ ಅವರ ಸಲಹೆಗಳನ್ನು ಗೌರವಿಸುತ್ತಾ ತನ್ನ ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕ್ರೈಂಟೋರ್ಸ್ ಗ್ರೂಪ್ ಆಫ್ ಕಂಪನಿಯ ಚೇರ್ಮನ್ ನಿಲೇಶ ಚೌಗಲೆ ತಿಳಿಸಿದರು. ಅವರು ಇಂದು ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ನಿಮಿತ್ತ ಹಮ್ಮಿಕೊಂಡ “ಇಂಡಕ್ಷನ್” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ವಿದ್ಯಾರ್ಥಿಗಳು ತಮಗೆ ಉತ್ತಮ ಪ್ಯಾಕೇಜ್ ಸಿಗುತ್ತದೆ, ಬೇಗನೆ ಶ್ರೀಮಂತರಾಗುತ್ತೇವೆ ಎಂಬ ಕಾರಣಕ್ಕಾಗಿ ಇಂಜಿನಿಯರಿಂಗ್ ಆಯ್ಕೆ ಮಾಡದೆ ದೇಶದ ಅಭಿವೃದ್ಧಿಗಾಗಿ ಇಂಜಿನಿಯರಿಂಗ್ ಆಯ್ಕೆ ಮಾಡಿಕೊಂಡು ಪರಿಶ್ರಮದಿಂದ ಅಧ್ಯಯನ ಮಾಡಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದರು.
ಇನ್ನೋರ್ವ ಅತಿಥಿ ಶಂಕರ ಇಂಜಿನಿಯರಿಂಗ್ ವರ್ಕ್ಸ್ ನ ಮುಖ್ಯಸ್ಥ ವಿಲಾಸ್ ಬಾದಾಮಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪದವಿಗಾಗಿ ಇಂಜಿನಿಯರಿಂಗ್ ಓದದೆ ನಿಜವಾದ ಇಂಜಿನಿಯರ್ ಗಳಾಗಲು ಹಾಗೂ ಭವಿಷ್ಯದ ಉಧ್ಯಮಿಗಳಾಗಲು ಇಂಜಿನಿಯರಿಂಗ್ ಪದವಿ ಓದಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಪಾಲಕರು ಹಗಲಿರುಳೆನ್ನದೆ ಶ್ರಮಿಸುತ್ತಾರೆ. ಇಂದಿನ ವಿದ್ಯಾರ್ಥಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಪಾಲಕರ ಪಾಲನೆ ಪೋಷಣೆ ಮಾಡಲು ಶ್ರಮಿಸಬೇಕು ಎಂದರು.
ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್ಮನ್ ಎಫ್. ವಿ. ಮಾನ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಕಾಲೇಜಿನ ಮೂಲ ವಿಜ್ಞಾನ ಹಾಗೂ ಮಾನವೀಯತೆ ವಿಭಾಗದ ಮುಖ್ಯಸ್ಥ ಡಾ. ಅಶೋಕ ಹುಲಗಬಾಳಿ ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಮಂಜುನಾಥ ಶರಣಪ್ಪನವರ್ ಹಾಗೂ ಸುಷ್ಮಾ ಮುಳಗುಂದ ನಿರೂಪಿಸಿ ವಂದಿಸಿದರು.