ಚಾಮರಾಜನಗರ: ಜಿಲ್ಲೆಯ ಕಬ್ಬಳ್ಳಿ ಸಂಚ್‌ನ 30 ಗ್ರಾಮಗಳ ಆರೋಗ್ಯ ಸುಧಾರಣೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ‘ಏಕಲ್ ಆರೋಗ್ಯ ಫೌಂಡೇಶನ್ ಆಫ್ ಇಂಡಿಯಾ’ ವತಿಯಿಂದ ಬೇಗೂರಿನ ಕೇಂದ್ರದಲ್ಲಿ ‘ಏಕಲ್ ಆರೋಗ್ಯ ಗ್ರಾಮ ಸಂಘಟನೆ’ಯ ಉದ್ಘಾಟನೆ, ಬುಧವಾರದಂದು ನೆರವೇರಿತು.
ಏಕಲ್ ವಿದ್ಯಾಲಯದ ಅಂಗ ಸಂಸ್ಥೆಯಾಗಿರುವ ಈ ಫೌಂಡೇಶನ್ ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಸಮಗ್ರ ಆರೋಗ್ಯ ಸೇವೆ, ಆರೋಗ್ಯ ಶಿಕ್ಷಣ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯನ್ನು ಒದಗಿಸುತ್ತಿದ್ದು, ವಿಶೇಷವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಅಂಚಲ್ ಉಪಾಧ್ಯಕ್ಷ ಕುಂಟೇ ಗೌಡರು, “ಏಕಲ್ ವಿದ್ಯಾಲಯದ ಗುರಿ, ಉದ್ದೇಶ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿನ ಆರೋಗ್ಯ ಸೇವೆಯ ಮಹತ್ವವನ್ನು ಗ್ರಾಮೀಣ ಜನರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಾಮರಾಜನಗರ ಜಿಲ್ಲಾ ಪ್ರಚಾರಕ, ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಅವರು, “ಗ್ರಾಮೀಣ ಸಮಾಜದಲ್ಲಿ ವ್ಯಕ್ತಿಯ ಸೇವಾ ಮನೋಭಾವ, ಜೀವನ ಮೌಲ್ಯಗಳು ಹಾಗೂ ಭಾರತೀಯ ಸಂಸ್ಕಾರ ಶಿಕ್ಷಣವೇ ಸಮುದಾಯದ ಬಲಿಷ್ಠ ಭವಿಷ್ಯಕ್ಕೆ ದಾರಿ” ಎಂದು ಒತ್ತಿ ಹೇಳಿದರು.
ಏಕಲ್ ಗ್ರಾಮೋಥಾನ್ ಫೌಂಡೇಶನ್‌ನ ಬೇಗೂರಿನ ಪ್ರಾಜೆಕ್ಟ್ ಮ್ಯಾನೇಜರ್ ನಾಗರಾಜ್, ಸಂಸ್ಥೆ ಕೈಗೊಂಡಿರುವ ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಟೈಲರಿಂಗ್ ಹಾಗೂ ಕಂಪ್ಯೂಟರ್ ತರಬೇತಿ ಸೇರಿದಂತೆ ಗ್ರಾಮೀಣ ಮಹಿಳೆಯರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ಸಂಯೋಜಕಿ ಲತಾ ಆಶೋಕ್, “ಬೇಗೂರು ಸುತ್ತಲಿನ ಹಳ್ಳಿಗಳಲ್ಲಿ ರಕ್ತಹೀನತೆ ಜಾಗೃತಿ, ಸ್ವಚ್ಛತೆ ಮತ್ತು ಆರೋಗ್ಯ ಶಿಕ್ಷಣವನ್ನು ಪ್ರಾಮುಖ್ಯತೆಯಿಂದ ನಡೆಸಲಾಗುತ್ತಿದ್ದು, 5 ದಿನಗಳ ಅವಧಿಯಲ್ಲಿ ಆಯ್ಕೆಯಾದ ಆರೋಗ್ಯ ಸೇವಕಿಯರಿಗೆ ವೃತ್ತಿಪರ ತರಬೇತಿ ನೀಡಲಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಅಂಚಲ್ ಉಪಾಧ್ಯಕ್ಷ ಕುಂಟೇ ಗೌಡ, ದಕ್ಷಿಣ ಭಾರತದ ಪ್ರಭಾರಿ ಶಾಂತಿ ವೆಂಕಟೇಶ್, ಉದ್ಯಮಿ ಬಾಬುಲಾಲ್, ಕಬ್ಬಳ್ಳಿ ಸಂಚ್ ಅಧ್ಯಕ್ಷ ಶಿವಕುಮಾರ, IVD ಪ್ರಾಜೆಕ್ಟ್ ಮ್ಯಾನೇಜರ್ ನಾಗರಾಜ್, IVD ಕೋಆರ್ಡಿನೇಟರ್ ಗುರುಪ್ರಸಾದ್ ಹಾಗೂ ಹಲವಾರು ಆರೋಗ್ಯ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟೆಲಿಮೆಡಿಸಿನ್ ಮೂಲಕ ಗ್ರಾಮೀಣ ಹಳ್ಳಿಗಳಿಗೆ ತಲುಪುವ ಆರೋಗ್ಯ ಸೇವೆ, ಸಮುದಾಯ ಆರೋಗ್ಯ ಕಾರ್ಯಕರ್ತರ ತರಬೇತಿ, ರಕ್ತಹೀನತೆ ತಡೆ, ಶೌಚಾಲಯ ಬಳಕೆ ಹೆಚ್ಚಳ, ಸುರಕ್ಷಿತ ಕುಡಿಯುವ ನೀರಿನ ಬಳಕೆ, ನೀರಿನಿಂದ ಹರಡುವ ರೋಗಗಳ ತಡೆ ಮತ್ತು ಸೋಕ್ ಪಿಟ್‌ಗಳಂತಹ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಈ ಯೋಜನೆ ಈಗಾಗಲೇ ಪ್ರಭಾವಶೀಲ ಫಲಿತಾಂಶ ನೀಡಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143