ಬೆಳಗಾವಿ: ಪ್ಲಾಸ್ಟಿಕ್ ಬಳಕೆಯನ್ನು ಶೂನ್ಯಗೊಳಿಸಿ ಸ್ವಚ್ಛ ಮತ್ತು ಸುಂದರ ಬೆಳಗಾವಿಯನ್ನು ನಿರ್ಮಿಸುವಲ್ಲಿ ಬೀದಿ ಬದಿ ವ್ಯಾಪಾರಿಗಳು ಪ್ರಮುಖ ಪಾತ್ರವಹಿಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತೆ ಶುಭಾ ಬಿ. ಅವರು ಹೇಳಿದರು.
ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ “ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪಘಟಕ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿ” ರಚನೆ ಕುರಿತು ನಡೆದ ಸಭೆಯಲ್ಲಿ ಆಯುಕ್ತರು ಮಾತನಾಡಿದರು. ಅವರು, “ವ್ಯಾಪಾರಿಗಳು ತಮ್ಮ ಬಳಿ ಬರುವ ಗ್ರಾಹಕರಿಗೆ `ಅಕ್ಕಾ, ಅಣ್ಣಾ, ಅಪ್ಪಾ’ ಎಂದು ಕೈಮುಗಿದು ಮನೆಯಿಂದ ಕೈ ಚೀಲ ತಂದುಕೊಳ್ಳಿ ಎಂದು ಪ್ರೋತ್ಸಾಹಿಸಿದರೆ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತದೆ ಮತ್ತು ನಗರ ಸ್ವಚ್ಛವಾಗುತ್ತದೆ,” ಎಂದರು.
ಬೀದಿ ಬದಿ ವ್ಯಾಪಾರಿಗಳು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು. “ನೀವು ಒಗ್ಗಟ್ಟಾಗಿ ನಿಂತರೆ ಪಾಲಿಕೆಯಿಂದ ಸೌಲಭ್ಯಗಳನ್ನು ಹಕ್ಕಿನಿಂದ ಕೇಳಬಹುದಾಗುತ್ತದೆ,” ಎಂದು ಹೇಳಿದರು.
ಈ ಸಭೆಯಲ್ಲಿ ಆಡಳಿತಪಕ್ಷದ ನಾಯಕ ಹನುಮಂತ ಕೊಂಗಾಲಿ ಅವರು ಮಾತನಾಡಿ, “ನಿರ್ದಿಷ್ಟ ಮಾರ್ಗಸೂಚಿ ಆಧಾರಿತ ಕರದರ ನಿಗದಿಯಾಗಲಿದೆ. ವ್ಯಾಪಾರಸ್ಥರು ನಿಯಮಬದ್ಧವಾಗಿ ಸ್ಥಳಾವಕಾಶ ಮಾಡಿಕೊಂಡು ವ್ಯಾಪಾರ ನಡೆಸಿದರೆ ಅಧಿಕಾರಿಗಳೊಂದಿಗೆ ಸಹಕಾರ ಹಾಗೂ ಹೊಂದಾಣಿಕೆ ಸಾಧ್ಯವಾಗುತ್ತದೆ,” ಎಂದು ಹೇಳಿದರು.
ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮುಝಮ್ಮಿಲ್ ಢೋಣಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಾಗೂ ಹಲವಾರು ಬೀದಿ ಬದಿ ವ್ಯಾಪಾರಿಗಳು ಹಾಜರಿದ್ದರು. ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯ ಖಾಲಿ ಸ್ಥಾನಗಳಿಗೆ ಚುನಾವಣೆಯೂ ನಡೆದಿತು.
ಪ್ಲಾಸ್ಟಿಕ್ ಮುಕ್ತ ಬೆಳಗಾವಿಗೆ ಬೀದಿ ಬದಿ ವ್ಯಾಪಾರಿಗಳು ಜವಾಬ್ದಾರಿಯಿಂದ ಮತ್ತು ಸಂಘಟಿತವಾಗಿ ಮುಂದಾಗಬೇಕಿದೆ. ಪಾಲಿಕೆ ಹಾಗೂ ವ್ಯಾಪಾರಸ್ಥರ ನಡುವೆ ಹೊಂದಾಣಿಕೆ ಸಧ್ದಿಯಾಗಿ ಅಭಿವೃದ್ಧಿ ಸಾಧ್ಯವೆನ್ನಲಾಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143