ಬೆಳಗಾವಿ: ನಗರದ ಶಿವಬಸವನಗರದಲ್ಲಿರುವ, ನಾಗನೂರು ಶ್ರೀ ರುದ್ರಾಕ್ಷಿಮಠ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಟ್ರಾನ್ಸ್ ಡಿಸಿಪ್ಲೆನರಿ ಲರ್ನಿಂಗ್ ಸೊಲುಶನ್ಸ್ ಪ್ರೈವೇಟ್ ಲಿಮಿಟೆಡ್ ಮಾರ್ಗದರ್ಶನದಲ್ಲಿ, ಸ್ಟೀಮ್ – ಎಚ್ ತರಬೇತಿ ಮತ್ತು ಸಂಶೋಧನಾ ಕೇಂದ್ರದ ಅಡಿಗಲ್ಲು ಸಮಾರಂಭ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ವೆಂಕಪ್ಪಯ್ಯ ದೇಸಾಯಿಯವರು, ಭಾರತೀಯ ಸಂಪ್ರದಾಯ ಹಾಗೂ ಅದರ ಹಿಂದೆ ಇದ್ದ ವೈಜ್ಞಾನಿಕ ಮನೋಭಾವನೆಯ ಕುರಿತು ತಿಳಿಸಿದರು. ನಾವು ಈಗ ಹುಲ್ಲಿನ ರವದಿಗೆ ಬೆಂಕಿ ಹಚ್ಚಿ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡುತ್ತಿದ್ದೇವೆ. ಪ್ಲಾಸ್ಟಿಕ್ ಸುಡುವುದರ ಮೂಲಕ ಕಾರ್ಸನೊಜೆನಿಕ ಅಂದರೆ ಕಾನ್ಸರ್ ಕಾರಕ ಅಂಶಗಳನ್ನು ಬಿಡುಗಡೆ ಮಾಡುವ ಅನಿಲಗಳನ್ನು ಹುಟ್ಟು ಹಾಕುತ್ತಿದ್ದೇವೆ. ಹೀಗೆಲ್ಲ ಮಾಡುವುದರಿಂದಲೇ, ನಾವು ಈಗ ಇನ್ನೂ ಫೆಬ್ರುವರಿಯಲ್ಲಿ ಎಸಿ ಹಚ್ಚಿಕೊಂಡು ಕೂಡುವ ಪರಿಸ್ಥಿತಿ ಬಂದಿದೆ ಹಾಗಾಗಿ ನಾವು ಹಳೆ ಬೇರು ಹೊಸ ಚಿಗುರು ಅನ್ನುವ ಹಾಗೆ ಹಳೆಯ ವಿಜ್ಞಾನವನ್ನು ಹೊಸ ತಂತ್ರಜ್ಞಾನವನ್ನು ಬೆರೆಸೋಣ ಎಂದು ಹೇಳಿದರು.
ಆನಂತರ ಡಾ.ಬಿ.ಈ ರಂಗಸ್ವಾಮಿಯವರು ಮಾತನಾಡಿ, ನಾನು ದಾವಣಗೆರೆಯ ವಿಜ್ಞಾನ ಕೇಂದ್ರದ ಕಾರ್ಯದರ್ಶಿಯಾಗಿ ಕೆಲಸಮಾಡಲು ನನಗೆ ಪ್ರೇರಣೆಯಾದದ್ದು, ನಾಗನೂರು ಸ್ವಾಮಿಗಳ ಕಾರ್ಯಗಳು. ವೈಜ್ಞಾನಿಕ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯಕ್ಕಾಗಿ ಇಂತಹ ಸಂಸ್ಥೆಗಳು ಕಾರ್ಯವನ್ನ ನಿರ್ವಹಿಸಿದಾಗ ಮಾತ್ರ ಅದು ಹೆಚ್ಚಾಗುತ್ತದೆ ಎಂದರು. ಇತ್ತೀಚೆಗಿನ ವರದಿಗಳನ್ನು ನಾವು ನೋಡಿದಾಗ ನಾವು ಸಾಕ್ಷರತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ವೈಜ್ಞಾನಿಕ ಸಾಕ್ಷರತೆ ಬಹಳ ಕಡಿಮೆ. ಆದರೆ ಇದೆ 2019 – 20 ರ ವರದಿಯನ್ನ ನಾವು ನೋಡಿದಾಗ, ಆವತ್ತಿನ ಸಾಕ್ಷರತಾ ಅಂಕ ಇದ್ದದ್ದು 80.7 % ರಷ್ಟು. ಐದಾರು ವರ್ಷಗಳಲ್ಲಿ ಒಂದಿಷ್ಟು ಪ್ರತಿಶತದಷ್ಟು ಹೆಚ್ಚಲಿಕ್ಕೆ ಮೂಲ ಕಾರಣ, ವೈಜ್ಞಾನಿಕ ತಳಹದಿಯ ಮೇಲೆ ಸಮಾಜ ಕಟ್ಟುವ ಕಾರ್ಯವನ್ನು ಮಾಡುತ್ತಿರುವಂತಹ ಇಂತಹ ಮಠಗಳಿಂದ ಅದು ಸಾಧ್ಯವಾಗಿದೆ ಎಂದು ಹೇಳಿದರು. ಇದರಿಂದಲೇ ನಮಗೆ ವೈಜ್ಞಾನಿಕ ಭ್ರಾತೃತ್ವ ಹಾಗೂ ತಿಳುವಳಿಕೆ ಬರುತ್ತದೆ ಎಂದು ಹೇಳಿದರು.
ಈ ವೇಳೆ, ದಿವ್ಯ ಸಾನಿಧ್ಯ ವಹಿಸಿದ ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ಡಂಬಳ, ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ಶ್ರೀ ರುದ್ರಾಕ್ಷಿಮಠ, ಶಿವಬಸವ ನಗರ, ಬೆಳಗಾವಿ, ಶ್ರೀ ಮಹಾಂತೇಶ ಕೌಜಲಗಿ ಮಾನ್ಯ ಶಾಸಕರು, ಬೈಲಹೊಂಗಲ ಹಾಗೂ ನಿರ್ದೇಶಕರು ಎಸ್.ಎಸ್, ಶಿಕ್ಷಣ ಸಂಸ್ಥೆ, ಪ್ರೊ. ವೆಂಕಪ್ಪಯ್ಯ ದೇಸಾಯಿ ನಿರ್ದೇಶಕರು, ಭಾರತೀಯ ತಂತ್ರಜ್ಞಾನ ಸಂಸ್ಥೆ (IT) ಧಾರವಾಡ, ರಾಹುಲ್ ಶಿಂಧೆ ಐಎಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಬೆಳಗಾವಿ, ಡಾ. ಬಿ. ಈ. ರಂಗಸ್ವಾಮಿ ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ಕೆ. ಎಚ್. ರವೀಂದ್ರ ಇನ್ಫೋಸಿಸ್ ಟೆಕ್ನಾಲಾಜಿ ಲಿಮಿಟೆಡ್, ಬೆಂಗಳೂರು, ಎಸ್. ಪಿ. ಹಿರೇಮಠ ಕಾರ್ಯದರ್ಶಿ, ಶ್ರೀ ಸಿದ್ಧರಾಮೇಶ್ವರ ಏಜುಕೇಶನ್ ಸೋಸೈಟಿ, ಬೆಳಗಾವಿ, ಡಾ. ಬಸನಗೌಡ ಬಿ. ಪಾಟೀಲ CPEng ಸಹ ಸಂಸ್ಥಾಪಕರು, ಎಫ್.ಪಿ.ಡಬ್ಲ್ಯೂ ಟೆಕ್ನಾಲಜಿಸ್ ಪ್ರೈವೆಟ್ ಲಿಮಿಟೆಡ್, ಮೆಲ್ಲೊರ್ನ್, ಆಸ್ಟ್ರೇಲಿಯಾ, ಮುಖ್ಯಸ್ಥರು ಹಾಗೂ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.