Live Stream

[ytplayer id=’22727′]

| Latest Version 8.0.1 |

State News

ಪರರ ಕಷ್ಟ ಸುಖಗಳಿಗೆ ಸ್ಪಂದಿಸಿದ ಅಪರೂಪದ ಸ್ವಾಮಿಗಳು ಗುರುಸಿದ್ಧ ಶ್ರೀಗಳು; ಡಾ. ತೋಂಟದ ಸಿದ್ದರಾಮ ಶ್ರೀಗಳು

ಪರರ ಕಷ್ಟ ಸುಖಗಳಿಗೆ ಸ್ಪಂದಿಸಿದ ಅಪರೂಪದ ಸ್ವಾಮಿಗಳು ಗುರುಸಿದ್ಧ ಶ್ರೀಗಳು; ಡಾ. ತೋಂಟದ ಸಿದ್ದರಾಮ ಶ್ರೀಗಳು

ಬೆಳಗಾವಿ: ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ, ಎಲ್ಲ ಜಾತಿ ಧರ್ಮದವರನ್ನು ಸಮಾನವಾಗಿ ಕಂಡ ಅಪರೂಪದ ಸ್ವಾಮಿಗಳೆಂದರೆ ಅದು ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. . ತೋಂಟದ ಸಿದ್ದರಾಮ ಸ್ವಾಮೀಜಿಯವರು ನುಡಿದರು.

ಅವರಿಂದು ಬೆಳಗಾವಿಯಲ್ಲಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾ ಸ್ವಾಮೀಜಿಯವರ 75ನೇ ವರ್ಷದ ಅಮೃತ ಮಹೋತ್ಸವದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬೆಳಗಾವಿಯಂತಹ ಗಡಿ ಭಾಗದಲ್ಲಿ ಕಾರಂಜಿ ಮಠದ ಶ್ರೀಗಳು ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. ಜನಪರವಾದ ಕಾರ್ಯಕ್ರಮಗಳಿಗೆ ಸದಾ ಮುಂದಿರುವ ಅವರ ಜನಪರವಾದ ಸೇವೆ ಅದ್ವಿತೀಯವಾಗಿದೆ. ಸಮಾಜದಲ್ಲಿನ ಎಲ್ಲ ಕ್ಷೇತ್ರಗಳ ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಕರೆಸಿ, ಗೌರವಿಸಿ ಸತ್ಕರಿಸಿ ಅವರಿಂದ ಹೆಚ್ಚಿನ ಸೇವೆ ಸಮಾಜಕ್ಕೆ ಸಿಗುವಂತೆ ಮಾಡಿದವರು. ಅಪಾರವಾದ ಕಷ್ಟ ನಷ್ಟಗಳನ್ನು ಸಹಿಸಿಕೊಂಡು ಬೆಳೆದು ಸಮಾಜಕ್ಕಾಗಿ ಮತ್ತು ಜನರಿಗಾಗಿ ಏನೆಲ್ಲವನ್ನು ಮಾಡಿದರು. ತಮಗಾಗಿ ಅವರು ಏನನ್ನು ಮಾಡಲಿಲ್ಲ. ಪರೋಪಕಾರಿ ಸ್ವಾಮಿಯಾಗಿ ಜನಪ್ರಿಯರಾದರು. ಇಂಥವರನ್ನು ಸಮಾಜ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದು ಕರ್ತವ್ಯವೂ ಹೌದು. ಇಂದಿಗೂ ಹಲವು ದಶಕಗಳಿಂದ ಅನುಭವದ ಸುಧೆಯನ್ನು ನಿರಂತರವಾಗಿ ಹಂಚಿಕೊಂಡು ಬಂದವರು. ಪ್ರೀತಿ ವಿಶ್ವಾಸಕ್ಕೆ ಧರ್ಮ ಎಂದೂ ಅಡ್ಡಿಯಾಗಲಾರದು ಎಂಬುದನ್ನು ತಮ್ಮ ನಡೆ ಮತ್ತು ನುಡಿಯ ಮೂಲಕ ತೋರಿದವರು ಎಂದು ಡಾ . ತೋಂಟದ ಸಿದ್ದರಾಮ ಸ್ವಾಮೀಜಿಯವರು ಹೇಳಿದರು.

ಕಾರ್ಯಕ್ರಮದ ಸಮ್ಮುಖದಲ್ಲಿದ್ದ ಹುಕ್ಕೇರಿಯ ಗುರು ಶಾಂತೇಶ್ವರ ಹಿರೇಮಠದ ಶ್ರೀ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಮಾತನಾಡಿ, ಗುರುಸಿದ್ಧ ಮಹಾಸ್ವಾಮಿಗಳು ಮಾನವ ಧರ್ಮ ತತ್ವ ಬಿತ್ತಿದ ಅಪರೂಪದ ಸ್ವಾಮಿಗಳು. ಕಾರಂಜಿಯಂತೆ ಎಲ್ಲರನ್ನು ಒಂದುಗೂಡಿಸಿ ಎಲ್ಲರೊಳಗೆ ಒಂದಾದವರು ಎಂದು ಬಣ್ಣಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಮಾತನಾಡಿ, ಕೆಎಲ್ಇ ಸಂಸ್ಥೆಗೆ ಕಾರಂಜಿ ಮಠ ನೀಡಿದ ದೇಣಿಗೆ ಸದಾಕಾಲ ಸ್ಮರಿಸಿಕೊಳ್ಳುವಂತದ್ದು . ಅದೇ ರೀತಿ ಹಲವಾರು ಸಂಸ್ಥೆಗಳಿಗೆ ದೇಣಿಗೆಯನ್ನು ನೀಡಿದ ಕಾರಂಜಿ ಮಠ ದಾನಮ್ಮದೇವಿ ದೇವಸ್ಥಾನ ಸೇರಿದಂತೆ ಬಹಳಷ್ಟು ಕಡೆ ಬೆಳವಣಿಗೆಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಎಲ್ಲಿಯೂ ಹೇಳಿಕೊಂಡಿಲ್ಲ. ಶ್ರೀಗಳದ್ದು ಯಾವಾಗಲೂ ನೀಡುವ ಕೈ. ತಾವು ಮಾಡಿದ ಕಾರ್ಯಗಳಿಗೆ ಎಂದು ಪ್ರಚಾರವನ್ನು ಬಯಸಿದವರಲ್ಲ ಎಂದರು.

 

ಮಾಜಿ ಶಾಸಕ ಫಿರೋಜ್ ಸೇಠ್ ಮಾತನಾಡಿ, ತಮ್ಮ ಮನೆತನ ಮತ್ತು ಕಾರಂಜಿ ಮಠದ ಶತಮಾನದಷ್ಟು ಹಳೆಯ ಸಂಬಂಧವನ್ನು ಮತ್ತು ತಾವು ಹಾಗೂ ಕಾರಂಜಿ ಮಠದ ಶ್ರೀಗಳ ಬಾಲ್ಯವನ್ನು ನೆನಪಿಸಿಕೊಂಡರು. ತಾವು ಹಜ್ ಯಾತ್ರೆಗೆ ಹೊರಡುವಾಗ ತಮ್ಮನ್ನು ಮಠಕ್ಕೆ ಕರೇಯಿಸಿಕೊಂಡು ಸತ್ಕರಿಸಿ ಇಸ್ಲಾಂ ಧರ್ಮದ ಟೋಪಿಯನ್ನು ಮತ್ತು ರುದ್ರಾಕ್ಷಿಯ ಜಪಮಾಲೆಯನ್ನು ನೀಡಿ ಆಶೀರ್ವದಿಸಿದ್ದನ್ನು ನೆನಪಿಸಿಕೊಂಡು ಕ್ಷಣಕಾಲ ಗದ್ಗದಿತರಾದರು. ಜಾತಿ ಧರ್ಮವನ್ನು ಮೀರಿದ ಮಠ ಇದಾಗಿದೆ ಎಂದು ಬಣ್ಣಿಸಿದರು.

 

ಮಾಜಿ ಮುಖ್ಯಮಂತ್ರಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಮಾತನಾಡಿ, ಗುರುಸಿದ್ದ ಸ್ವಾಮಿಗಳು

ಬಸವ ತತ್ವದ ಅನುಸಾರ ಸಾಮಾಜಿಕ ಕಾರ್ಯವನ್ನು ಮಾಡಿ ಅದ್ವಿತೀಯ ಸ್ವಾಮಿಗಳೇನಿಸಿಕೊಂಡರು ಎಂದರು.

 

ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ ಬಸವ ತತ್ವದಂತೆ ವೀರಶೈವ ಲಿಂಗಾಯತ ಮಠಗಳು ಕೈಗೊಂಡ ಶಿಕ್ಷಣ ದಾಸೋಹ, ಅನ್ನ ದಾಸೋಹ ಕಾರ್ಯಗಳು ಸರ್ಕಾರಕ್ಕೆ ಮಾರ್ಗದರ್ಶಿಯಾಗಿವೆ. ಅದನ್ನೇ ಸರ್ಕಾರಗಳು ಇಂದು ಮಾಡುತ್ತಿವೆ. ಸರ್ಕಾರ ಮಾಡುವ ಕೆಲಸಕ್ಕೆ ಪರ್ಯಾಯವಾಗಿ ಮಠಮಾನ್ಯಗಳು ಸಮಾಜಮುಖಿ ಕಾರ್ಯವನ್ನು ಮಾಡಿವೆ. ೨೦ ವರ್ಷಗಳ ಹಿಂದೆ ತಾವು ಶ್ರೀಮಠಕ್ಕೆ ಭೇಟಿ ನೀಡಿದಾಗ ಶ್ರೀಗಳು ತಮ್ಮನ್ನು ಭವಿಷ್ಯದ ದೊಡ್ಡ ಸಮಾಜ ಸೇವಕಿ ಆಗು ಎಂದು ಆಶೀರ್ವದಿಸಿದ್ದನ್ನು ನೆನಪಿಸಿಕೊಂಡರು.

ಅಮೃತ ಮಹೋತ್ಸವದಲ್ಲಿ ರುವ ಕಾರಂಜಿ ಮಠದ ಶ್ರೀ. ಗುರುಸಿದ್ಧ ಮಹಾಸ್ವಾಮಿಗಳು ತಮಗೆ ಸಲ್ಲಿಸಿದ ಗೌರವಕ್ಕೆ ಉತ್ತರವಾಗಿ ಆಶೀರ್ವಚನ ನೀಡುತ್ತಾ , ಎಲ್ಲ ವರ್ಗದವರಿಂದ, ಎಲ್ಲ ಜಾತಿ ಧರ್ಮಗಳವರಿಂದ ನಡೆದ ಈ ಕಾರ್ಯಕ್ರಮ ತಮಗೆ ಅಪಾರವಾದ ಸಂತೋಷವನ್ನು ತಂದಿದೆ .ಎಲ್ಲ ಜಾತಿ ಧರ್ಮಗಳನ್ನು ಒಗ್ಗೂಡಿಸಿದಾಗ ಮಾತ್ರ ಎಲ್ಲರಿಗೂ ಒಳಿತಾಗುತ್ತದೆ. ಯಾವುದೇ ಮಠಗಳು ಒಂದೇ ಜಾತಿಗೆ ಸೀಮಿತವಾಗಬಾರದು ಎಂದರು. ಶ್ರೀಮಠದ ಆಸ್ತಿಗೆ ಸಂಬಂಧಪಟ್ಟಂತೆ ದಶಕಗಳ ಕಾಲ ತಾವು ಕೋರ್ಟಿಗೆ ಅಲೆದಾಡುತ್ತಿರುವ ಸಂದರ್ಭದಲ್ಲಿ ಶಾಸಕರಾಗಿದ್ದ ಫಿರೋಜ್ ಸೆಟ್ ಅವರು ಶ್ರೀಮಠಕ್ಕೆ ಮಾಡಿದ ಉಪಕಾರವನ್ನು ಮರೆಯಲಾರದಂತದ್ದು. ಅದೇ ರೀತಿ ಶಾಸಕ ರಮೇಶ್ ಕುಡಚಿ, ದಿವಂಗತ ಸುರೇಶ್ ಅಂಗಡಿ , ಮಂಗಳ ಅಂಗಡಿ ಮತ್ತು ಬಹಳಷ್ಟು ಜನರು ಶ್ರೀಮಠಕ್ಕೆ ಇಲ್ಲಿಯವರೆಗೆ ಮಾಡಿದ ಸಹಾಯ ಸಹಕಾರಕ್ಕೆ ಅನಂತ ಅನಂತ ಕೃತಜ್ಞತೆಗಳು ಎಂದು ಅವರು ನುಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಿಗಿಮಠ ಮತ್ತು ಎ.ಕೆ ಪಾಟೀಲ್ ಅವರುಗಳು ಕಾರ್ಯಕ್ರಮವನ್ನು ನಿರ್ವಹಿಸಿದರು.

 

ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವದ ನೆನಪಿನ ಸಂಚಿಕೆ “ಅನುಭಾವ ಕಾರಂಜಿ” ಯನ್ನು ಲೋಕಾರ್ಪಣೆಗೊಳಿಸಲಾಯಿತು.

 

ಕಾರ್ಯಕ್ರಮದಲ್ಲಿ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಸ್ವಾಮೀಜಿ, ನಿಲಜಿಯ ಅಲೌಕಿಕ ಧ್ಯಾನ ಮಂದಿರದ ಶ್ರೀ ಶಿವಾನಂದ ಗುರೂಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾ ಸ್ವಾಮೀಜಿ , ರಾಘವೇಂದ್ರ ಕಾಗವಾಡ , ಗಂಗಾ ಮಾತಾಜಿ, ಕಾರಂಜಿ ಮಠದ ಡಾ.ಶಿವಯೋಗಿ ದೇವರು, ವಿಧಾನ ಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ, ಶಾಸಕರಾದ ಆಸೀಫ್ ಸೇಠ್, ಅಭಯ್ ಪಾಟೀಲ್, ಮಾಜಿ ಶಾಸಕರಾದ ರಮೇಶ್ ಕುಡಚಿ, ಸಂಜಯ್ ಪಾಟೀಲ್, ಅನಿಲ್ ಬೆನಕೆ, ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ಶ್ರೀಮತಿ ರತ್ನಪ್ರಭಾ ಬೆಲ್ಲದ, ಶ್ರೀಮತಿ ಸರಳ ಹೇರೇಕರ್, ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಶಂಕರಗೌಡ ಪಾಟೀಲ್ , ರವಿ ಪಾಟೀಲ್ , ಪ್ರಕಾಶ್ ಗಿರಿಮಲ್ಲನವರ್, ಡಾ. ಬಸವರಾಜ ಜಗಜಂಪಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀ ಗುರುಸಿದ್ಧ ಮಹಾಸ್ವಾಮಿಜಿಯವರನ್ನು ಕಾರಂಜಿ ಮಠದಿಂದ ವೇದಿಕೆ ಸಾಯಂಕೃತ ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";