ಹುಕ್ಕೇರಿ: ಹುಕ್ಕೇರಿ ಮತಕ್ಷೇತ್ರದಲ್ಲಿ ಕತ್ತಿ ಕುಟುಂಬ ಮತ್ತು ಜಾರಕಿಹೊಳಿ ಕುಟುಂಬದ ನಡುವೆ ತೀವ್ರ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ಮೊನ್ನೆ ಕತ್ತಿ ಕುಟುಂಬ ನಡೆಸಿದ ಸಮಾವೇಶಕ್ಕೆ ಮರು ದಿನವೇ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಲಿಂಗಾಯತ ಮತದಾರರನ್ನು ತಲುಪುವ ಉದ್ದೇಶದಿಂದ ನಿಡಸೋಶಿಯ ದುರದುಂಡೇಶ್ವರ ಮಠಕ್ಕೆ ಭೇಟಿ ನೀಡಿದರು.
ಮಠದ ನಿಜಲಿಂಗೇಶ್ವರ ಶ್ರೀಗಳೊಂದಿಗೆ ಗೌಪ್ಯ ಸಭೆ ನಡೆಸಿದ ಬಳಿಕ, ನಿಡಸೋಶಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ, “ಹೊರಗಿನವರಿಗೆ ಆಡಳಿತ ನಡೆಸಲು ಬಿಡುವುದಿಲ್ಲ” ಎಂಬ ರಮೇಶ ಕತ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, “ಸಮಯ ಬಂದಾಗ ಉತ್ತರ ಕೊಡುತ್ತೇವೆ,” ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ವಿರುದ್ಧ ಕನ್ನೇರಿ ಮಠದಲ್ಲಿ ನಡೆದ ಲಿಂಗಾಯತ ಮುಖಂಡರ ಸಭೆ ಕುರಿತು ಮಾತನಾಡಿದ ಅವರು, “ಇಂತಹ ಸಭೆಗಳು 20 ವರ್ಷಗಳಿಂದ ನಡೆಯುತ್ತಿವೆ. ಅವರ ಶಕ್ತಿ ಅವರು ಪ್ರದರ್ಶನ, ನಮ್ಮ ಶಕ್ತಿ ನಮ್ಮ ಒಗ್ಗಟ್ಟು. ಅದು ಸಭೆಯಷ್ಟೇ, ಪ್ರಾಯೋಗಿಕವಾಗಿ ಜಾರಿಯಾಗುವುದಿಲ್ಲ,” ಎಂದರು.
ಮೋದಿ ಅವರ ನಾಯಕತ್ವದ ಕುರಿತಂತೆ ಬಿಜೆಪಿ ಮುಖಂಡರ ಹೇಳಿಕೆಗೆ ಬೆಂಬಲ ಸೂಚಿಸಿದ ಸತೀಶ, “ನಾವು ಕೂಡ ಸಾಕಷ್ಟು ಬಾರಿ ಹೇಳಿದ್ದೇವೆ – ಮೋದಿ ಇರುವವರೆಗೆ ಬಿಜೆಪಿ. ಮೋದಿ ಅವರದೇ ಆದ ವೈಯಕ್ತಿಕ ವೋಟ್‌ಬ್ಯಾಂಕ್ ಇದೆ,” ಎಂದರು. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ವಿಚಾರವಾಗಿ, “ಮುಖಂಡರೊಂದಿಗೆ ಚರ್ಚಿಸಿ, ಜನರಿಗೆ ಒಳ್ಳೆಯದು ಆಗುವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಪೋಸ್ ಕೊಡುವ ರಾಜಕೀಯ ನಮ್ಮದು ಅಲ್ಲ,” ಎಂದು ಸ್ಪಷ್ಟಪಡಿಸಿದರು.
ಸಮಾವೇಶಗಳ ಬಗ್ಗೆ ವಿಶ್ವಾಸವಿಲ್ಲ ಎಂದು ಹೇಳಿದ ಸತೀಶ, “5 ಲಕ್ಷ ಜನರನ್ನು ಸೇರಿಸಿದ್ದೇವೆ, ನಿನ್ನೆ 2 ಸಾವಿರ ಜನ ಇದ್ದರು. ಜನ ಸೇರಿಸುವುದು ನಮಗೆ ಹೊಸದೇನಲ್ಲ. ಆದರೆ ಸಮಾವೇಶಗಳ ಮೇಲೆ ಭರವಸೆ ಇಲ್ಲ,” ಎಂದರು.
ಕತ್ತಿ ಕುಟುಂಬದ ರಾಜಕೀಯ ಚಟುವಟಿಕೆ ಬಗ್ಗೆ, “ಅವರಿಗೆ ಅರ್ಜೆಂಟ್ ಇದ್ದಷ್ಟು ನನಗೆ ಇಲ್ಲ. ನಾನು ಆಯುರ್ವೇದಿಕ ವೈದ್ಯನಂತೆ ನಿಧಾನವಾಗಿ ನಡೆಯುತ್ತೇನೆ,” ಎಂದು ತಿರುಗೇಟು ನೀಡಿದರು.
ಕೊನೆಗೆ, ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳ ರಚನೆಗಾಗಿ ಶೀಘ್ರದಲ್ಲೇ ಮುಖ್ಯಮಂತ್ರಿ ಅವರ ಬಳಿ ನಿಯೋಗ ಕರೆದೊಯ್ಯುವ ಯೋಜನೆ ಇದೆ ಎಂದು ಸಚಿವರು ತಿಳಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143