ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶ ಗಳನ್ನು ನೀಡುವುದರ ಜತೆಗೆ ಅವರು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹೆಣ್ಣು ಮಕ್ಕಳಿಗೆ ಧೈರ್ಯನೀಡುವ ಅಗತ್ಯತೆ ಇದೆ ಎಂದು ಯಮಕನಮರಡಿ ಪೋಲಿಸ್ ಠಾಣೆಯ ಪಿಎಸ್ಐ ಮಹಾದೇವ ಯಲಿಗಾರ ಅಭಿಪ್ರಾಯಪಟ್ಟರು.
ಹುಕ್ಕೇರಿ ತಾಲೂಕಿನ ಯರಗಟ್ಟಿಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಿಶೋರಿಯರಿಗಾಗಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಮುಂದುವರೆದು ಮಾತನಾಡಿ “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬುದು ಹಿಂದಿನಿಂದಲೂ ನಮ್ಮಲ್ಲಿ ಪ್ರಚಲಿತದಲ್ಲಿರುವ ಮಾತು. ಆದರೆ ಇದು ಮಾತಾಗಿಯೇ ಉಳಿಯಿತೇ ವಿನಾ ಅಕ್ಷರಶಃ ಅನುಷ್ಠಾನಲ್ಲೆ ಬರಲಿಲ್ಲ. ಕಳೆದ ಕೆಲವು ದಶಕಗಳಿಗೆ ಹೋಲಿಸಿದಲ್ಲಿ ಹೆಣ್ಣು ಮಕ್ಕಳು ಈಗ ಸಾಕಷ್ಟು ಪ್ರಮಾಣದಲ್ಲಿ ಸುಶಿಕ್ಷಿತರಾಗುತ್ತಿರುವರಾದರೂ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಬೇಕಿದೆ.
ಸುಭದ್ರತೆಯ ವಾತಾವರಣ ಕಲ್ಪಿಸುವ ಗುರಿ: ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ, ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗತಾರತಮ್ಯ, ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದ ಹೆಣ್ಣು ಬಳಲುತ್ತಿದ್ದಾಳೆ. ಇಂದಿನ ಆಧುನಿಕ ಯುಗದಲ್ಲೂ ಹೆಣ್ಣು ಮಗುವನ್ನು ಅಭದ್ರತೆ ಕಾಡುತ್ತಿದೆ ಎಂದರೆ ಸಮಾಜ ಇನ್ನೂ ಹಿಂದುಳಿದಿದೆ ಎಂದೇ ಅರ್ಥ. ಕಲಿತ ಹೆಣ್ಣೂ ಕೂಡ ಉದ್ಯೋಗದ ಸ್ಥಳದಲ್ಲಿ ದೌರ್ಜನ್ಯ ಅನುಭವಿಸುವ ಎಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಈ ಎಲ್ಲ ತೊಡಕುಗಳನ್ನು ನಿವಾರಿಸಿ ಹೆಣ್ಣು ಮಕ್ಕಳಿಗೆ ಸುಭದ್ರತೆಯ ವಾತಾವರಣ ಕಲ್ಪಿಸುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕಿರಣ ಚೌಗಲಾ, ಉಪ ಪ್ರಾಂಶುಪಾಲರಾದ ಶ್ರೀಮತಿ ಎ.ಆರ್.ಮಠಪತಿ, ಮುಖ್ಯಾಧ್ಯಾಪಕ ಎಸ್.ಎ.ಸರಿಕರ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ನಂದಗಾವಿ, ದುರದುಂಡಿಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.