ಬೆಳಗಾವಿ: ನಗರದ ಚನ್ನಮ್ಮ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ಸಾಹಿತ್ಯ ಸರಸ್ವತಿಯರು ಹಾಗೂ ಮಕ್ಕಳ ನಂದನ ಕಾರ್ಯಕ್ರಮ ಜರುಗಿತು.
ನಂತರ ಕಾರ್ಯಕ್ರಮವನ್ನ ಉದ್ಘಾಟಿಸಿದ ಶ್ರೀಮತಿ ಜೀರಗ್ಯಾಳರವರು ಮಾತನಾಡಿ, ಸಾಹಿತ್ಯಿಕ ಕೃತಿಗಳನ್ನು ಓದುವುದು ಎಷ್ಟು ಮುಖ್ಯವೋ ಬರೆಯುವುದೂ ಅಷ್ಟೇ ಮುಖ್ಯ. ಇಂದು ೩ ಸಂಸ್ಥೆಗಳ ಆಶ್ರಯದಲ್ಲಿ ೨ ಕೃತಿಗಳ ಬಿಡುಗಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಮಾಡಲು ಸಂತಸವೆನಿಸುತ್ತದೆ. ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸೋಣ ಎಂದು ಹೇಳಿದರು.
ಕೃತಿ ಬಿಡುಗಡೆ ಮಾಡಿದ ನಂತರ ಸುನಂದಾ ಎಮ್ಮಿಯವರು ಮಾತನಾಡಿ, ಸಾಹಿತ್ಯ ಸರಸ್ವತಿ ಕೃತಿ ಬರೆಯುವಲ್ಲಿ ಸುರೇಶ ದೇಸಾಯಿಯವರು ಬಹಳ ಕಷ್ಟಪಟ್ಟಿದ್ದಾರೆ. ಅದಕ್ಕಾಗಿ ಅಭಿನಂದನೆಗಳು ಎಂದರು.
ಆನಂತರ ಚಾರಿತ್ರಿಕ ಕಾದಂಬರಿಕಾರರಾದ ಯ.ರು.ಪಾಟೀಲರವರು ಮಾತನಾಡಿ, ಸುರೇಶ ದೇಸಾಯಿಯವರು ಕನ್ನಡ ಅಂಕಿಗಳನ್ನು ಬಳಸುವಲ್ಲಿ ಯತ್ನಶೀಲರಾಗಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ನಮ್ಮ ಸಾಹಿತ್ಯದ ಬಗ್ಗೆ ನಾವೇ ಹೇಳಿಕೊಳ್ಳುವ ದುಸ್ಥಿತಿಯುಂಟಾಗಿದೆ. ಬೆಳಗಾವಿ ಮಹಿಳಾ ಸಾಹಿತ್ಯ ಒಳಗೊಂಡು ಇನ್ನುಳಿದ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಅನಾವರಣಗೊಳ್ಳಬೇಕಾಗಿದೆ ಎಂದು ಹೇಳಿದರು. ಸುರೇಶ ಸಕ್ರೆಣ್ಣವರ ಸ್ವಾಗತಿಸಿದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಈ ವೇಳೆ, ಹಿರಿಯ ಸಾಹಿತಿಗಳಾದ ಶ್ರೀಮತಿ ಸ.ರಾ.ಸುಳಕೂಡೆ, ಶ್ರೀಮತಿ ಸುನಂದಾ ಎಮ್ಮಿ, ಪಿ.ಬಿ ಸ್ವಾಮಿ, ಹಿರಿಯ ಕಾದಂಬರಿಕಾರರಾದ ಯ.ರು ಪಾಟೀಲ, ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ರಜನಿ ಜೀರಗ್ಯಾಳ, ಎಸ.ಪಿ ದಾಸಪ್ಪನವರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆ.ಗ್ರಾಮೀಣ, ಸಾಹಿತಿಗಳಾದ ಸುರೇಶ ದೇಸಾಯಿ, ಡಾ. ಅನ್ನಪೂರ್ಣ ಹಿರೇಮಠ ಹಾಗೂ ಸಾಹಿತ್ಯ ಪ್ರೇಮಿಗಳು ಹಿರಿಯರು ಉಪಸ್ಥಿತರಿದ್ದರು.