ಬೆಳಗಾವಿ: ಶಿವಬಸವ ನಗರದ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಡಿ.ಆರ್.ಡಿ. ಮಹಾವಿದ್ಯಾಲಯದ ಪ್ರಾಚಾರ್ಯ ರವಿಶಂಕರ ಮಠ ಅವರು, ಶಾಲಾ ಪರಿಸರ ಕೇವಲ ಶೈಕ್ಷಣಿಕ ವಿಷಯಗಳಿಗೆ ಸೀಮಿತವಾಗದೆ ಅದು ಕ್ರೀಡೆ, ಸಂಸ್ಕೃತಿ ಹಾಗೂ ಸಂಸ್ಕಾರ ನಿರ್ಮಾಣದ ತಾಣವಾಗಬೇಕು ಎಂದು ಅಭಿಪ್ರಾಯಪಟ್ಟರು. ಮುಂದುವರೆದು ಮಾತನಾಡಿದ ಅವರು ಕ್ರೀಡೆ ತಂಡ ಕೆಲಸ, ನಾಯಕತ್ವ ಗುಣ, ಹೊಣೆಗಾರಿಕೆ, ತಾಳ್ಮೆ ಮತ್ತು ಆತ್ಮ ವಿಶ್ವಾಸದಂತಹ ಜೀವನ ಕೌಶಲ್ಯಗಳನ್ನು ಕಲಿಸಲು ಸಹಾಯ ಮಾಡುತ್ತದೆ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸುತ್ತದೆ. ಕಾರಣ ವಿದ್ಯಾರ್ಥಿಗಳು ಬಾಲ್ಯದಲ್ಲೇ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಅತಿಥಿ ಸಜನಾ ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರ ಪಾಟೀಲ ಮಾತನಾಡಿ ಯಾವುದೇ ವ್ಯಕ್ತಿ ಒಂದೇ ದಿನದಲ್ಲಿ ಕ್ರೀಡಾಪಟುವಾಗಲು ಸಾಧ್ಯವಿಲ್ಲ. ಆದರೆ ಸತತ ಪ್ರಯತ್ನ, ನಿರಂತರ ಪರಿಶ್ರಮ ಹಾಗು ಸಮರ್ಪಣಾ ಭಾವವಿದ್ದರೆ ಯಾರು ಬೇಕಾದರೂ ಕ್ರೀಡಾಪಟುವಾಗಬಹುದು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಧುಮೇಹ, ಕ್ಯಾನ್ಸರ್, ಹೃದ್ರೋಗ, ಖಿನ್ನತೆ, ಆತಂಕ ಮತ್ತು ಒತ್ತಡದಂತಹ ದೀರ್ಘಕಾಲದ ಕಾಯಿಲೆಗಳಿಂದ ದೂರವಿರಬಹುದು ಎಂದರು.
ವೇದಿಕೆಯ ಮೇಲೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಉಪಪ್ರಾಚಾರ್ಯೆ ಶಿವಲೀಲಾ ಪೂಜಾರ, ದೈಹಿಕ ನಿರ್ದೇಶಕ ಶ್ರೀಧರ ನೇಮಗೌಡ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಪ್ರಾಚಾರ್ಯೆ ಪ್ರೇಮಲತಾ ಪಾಟೀಲ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರೋಹಿಣಿ ಚಾಜಗೌಡ ನಿರೂಪಿಸಿದರು. ಕೊನೆಗೆ ಶೈಲಜಾ ನರಗುಂದ ವಂದಿಸಿದರು.