ಕಾಂಚೀಪುರಂ: ಜಿಲ್ಲೆಯ ಮಣಿಮಂಗಲಂ ಬಳಿಯ ಪಡಪ್ಪೈನಲ್ಲಿ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಐಎಡಿಎಂಕೆ ನಾಯಕನೊಬ್ಬನಿಗೆ ಯುವತಿಯರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ಎಐಎಡಿಎಂಕೆ ಪಕ್ಷದ ಸ್ಥಳೀಯ ನಾಯಕ ಎಂ. ಪೊನ್ನಂಬಲಂ ಅವರನ್ನು ಯುವತಿಯರು ಪೊರಕೆಯಿಂದ ಧಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊನ್ನಂಬಲಂ ಕುಂದ್ರಾತೂರ್ ವೆಸ್ಟ್ ಯೂನಿಯನ್ ಎಂಜಿಆರ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿಯಾಗಿದ್ದರು. ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಎಐಎಡಿಎಂಕೆ, ಪಕ್ಷದಿಂದ ಉಚ್ಚಾಟಿಸಿದೆ. ಈ ನಿರ್ಧಾರವನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಪ್ರಕಟಿಸಿದ್ದು, ಪೊನ್ನಂಬಲಂ ಅವರ ಕ್ರಮಗಳು ಪಕ್ಷದ ನೀತಿಗಳು ಮತ್ತು ತತ್ವಗಳಿಗೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ.
ಸುಂಗುವರ್ಚತ್ರಂನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 24 ವರ್ಷದ ಇಬ್ಬರು ಯುವತಿಯರು, ಪೊನ್ನಂಬಲಂ ಅವರ ಮನೆಯಲ್ಲಿ ವಾಸವಿದ್ದರು. ಕೆಲವು ದಿನಗಳಿಂದ ಪೊನ್ನಂಬಲಂ, ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಭಯಭೀತರಾದ ಯುವತಿಯರು ಬಾಡಿಗೆ ಮನೆಯನ್ನು ತೊರೆದು, ಕಿಲ್ಪಡಪ್ಪೈ ಪ್ರದೇಶದ ಮತ್ತೊಂದು ಬಾಡಿಗೆ ಮನೆಯಲ್ಲಿ ನೆಲೆಸಿದರು.
ಆದರೆ, ಪೊನ್ನಂಬಲಂ ಮೊಬೈಲ್ ಮೂಲಕ ಯುವತಿಯೊಬ್ಬಳನ್ನು ಸಂಪರ್ಕಿಸಿ, ಮನೆಯ ಮುಂಗಡ ಹಣವನ್ನು ಹಿಂದಿರುಗಿಸುವುದಾಗಿ ಹೇಳಿ ಮನೆಗೆ ಕರೆಸಿಕೊಂಡಿದ್ದಾನೆ. ಯುವತಿ ಅಲ್ಲಿಗೆ ಹೋದಾಗ, ಪೊನ್ನಂಬಲಂ ಬಾಗಿಲು ಮುಚ್ಚಿ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಿಷ್ಟೇ ಅಲ್ಲದೆ, ಮತ್ತೆ ಆಕೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಕಿರುಕುಳ ನೀಡಲು ಪ್ರಾರಂಭಿಸಿದರು.
ಹೀಗಾಗಿ ಯುವತಿಯರಲ್ಲಿ ಒಬ್ಬಳು ಅವರನ್ನು ತನ್ನ ಮನೆಗೆ ಆಹ್ವಾನಿಸಿದಳು. ಆತ ಮನೆಗೆ ಬಂದಾಗ ಪೊರಕೆಗಳಿಂದ ಪೊನ್ನಂಬಲಂ ಮೇಲೆ ಹಲ್ಲೆ ಮಾಡಿದ್ದಾರೆ. ಗುಂಪಿನಲ್ಲಿದ್ದ ಯುವತಿಯೊಬ್ಬಳು ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.