ಬೆಂಗಳೂರು: ರಾಜ್ಯ ಸರ್ಕಾರದ ಹುದ್ದೆಗಳಿಗೆ ನೇಮಕ ಸಂದರ್ಭದಲ್ಲಿ ಕ್ರೀಡಾ ಸಾಧಕರಿಗೂ ಮೀಸಲು ಅವಕಾಶ ಕಲ್ಪಿಸಿ, ಕ್ರೀಡೆ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕೆಂಬ ಬೇಡಿಕೆ ಕೊನೆಗೂ ಫಲಿಸಿದೆ.
ಸರ್ಕಾರದ ವಿವಿಧ ಹುದ್ದೆಗಳಿಗೆ ನೇಮಕದ ವೇಳೆ ಕ್ರೀಡಾ ಸಾಧಕರಿಗೆ ಶೇ.2 ಹುದ್ದೆ ಮೀಸಲಿರಿಸಿ ಅಧಿಕೃತವಾಗಿ ಆದೇಶ ಹೊರಡಿಸಿದೆ. ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ-ಪಂಗಡ ಮತ್ತು ಇತರ ಹಿಂದುಳಿದ ವರ್ಗ ಸೇರಿ ಪ್ರತಿಯೊಂದು ವರ್ಗದಿಂದಲೂ ಪ್ರತಿ ಇಲಾಖೆಯ ಮಂಜೂರಾದ ವೃಂದ ಬಲದ ಶೇ.2 ಹುದ್ದೆಗಳನ್ನು ಕ್ರೀಡಾ ಸಾದಕ ಅಭ್ಯರ್ಥಿಗಳಿಗೆ ಮೀಸಲಿಡಬೇಕು ಎಂದು ಆದೇಶ 19 ತಿಳಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗಿದ್ದರೆ, ರಿಕ್ತ ಸ್ಥಾನಗಳನ್ನು ಅದೇ ಪ್ರವರ್ಗಕ್ಕೆ ಸೇರಿದ ಇತರ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅವಕಾಶ ಕಲ್ಪಿಸಿದೆ.
ಮೀಸಲಿಗೆ ಮಾನದಂಡ: ಕ್ರೀಡಾ ಸಾಧಕರ ಮೀಸಲು ಕೋಟಾಕ್ಕೆ ಮಾನದಂಡವನ್ನು ಸರ್ಕಾರ ನಿಗದಿಪಡಿಸಿ, 33 ಕ್ರೀಡೆಗಳ/ಆಟೋಟಗಳ ಪಟ್ಟಿಯನ್ನು ನಿರ್ದಿಷ್ಟವಾಗಿ ಗೊತ್ತುಪಡಿಸಿದೆ. ಅಥ್ಲೆಟಿಕ್ಸ್, ಅರ್ಚರಿ, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಜಿಮ್ನಾಸ್ಟಿಕ್, ಹಾಕಿ, ಕಬಡ್ಡಿ, ರೈಫಲ್ ಶೂಟಿಂಗ್, ವಾಲಿಬಾಲ್, ಭಾರ ಎತ್ತುವ ಸ್ಪರ್ಧೆ, ನೆಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ಯೋಗ, ಬೇಸ್ ಬಾಲ್, ರೆಸಲಿಂಗ್, ಸ್ವಿಮ್ಮಿಂಗ್ (ಅಕ್ಯಟಿಕ್), ಜೂಡೋ, ಕ್ರಿಕೆಟ್, ಖೋ ಖೋ, ಟೇಬಲ್ ಟೆನ್ನಿಸ್, ಹ್ಯಾಂಡ್ ಬಾಲ್, ವಾಟರ್ ಸ್ಪೋರ್ಟ್ಸ್- ರೋಯಿಂಗ್ ಹಾಗೂ ಕಯಾಕಿಂಗ್, ಕನೋಕಿಂಗ್, ಲಾನ್ ಟೆನ್ನಿಸ್, ಬ್ಯಾಡ್ಮಿಂಟನ್, ಸೇಪಕ್ ಟಕ್ರಾ, ಟೀಕ್ವಾಂಡೋ, ಪ್ಯಾರಾಲಾನ್ ಬೌಲ್ ಮತ್ತು ಪ್ಯಾರಾ ಟೆನ್ಪಿನ್ ಬೌಲಿಂಗ್. ನಿರ್ದಿಷ್ಟವಾಗಿ ಗೊತ್ತುಪಡಿಸಿದ ಕ್ರೀಡೆ ಅಥವಾ ಆಟಗಳಲ್ಲಿ ಒಬ್ಬ ಅಭ್ಯರ್ಥಿಯು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯಮಟ್ಟದಲ್ಲಿ ವೈಯಕ್ತಿಕ ಅಥವಾ ತಂಡಗಳು ಇಲ್ಲವೇ ಆಟಗಳ ಸದಸ್ಯರಾಗಿ ಪಾಲ್ಗೊಂಡಿದ್ದರೆ ಮಾತ್ರ ಪ್ರತಿಭಾವಂತ ಕ್ರೀಡಾಪಟು ಎಂದು ಪರಿಗಣಿಸತಕ್ಕದ್ದು ಎಂದು ಆದೇಶದಲ್ಲಿ ವಿವರಿಸಲಾಗಿದೆ