ಉತ್ತರ ಪ್ರದೇಶ: ಮೀರತ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಂಕೇರಖೇಡದಲ್ಲಿ ಅಕ್ಟೋಬರ್ 30 ರಂದು ಮೂರು ವರ್ಷದ ಬಾಲಕಿ ಉಸಿರುಗಟ್ಟಿ ಕಾರಿನೊಳಗೆ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಮಂಗಳವಾರದಂದು ಬಾಲಕಿಯ ತಂದೆ, ನಿರ್ಲಕ್ಷ್ಯದ ಆರೋಪದ ಮೇಲೆ ಯೋಧ ಲ್ಯಾನ್ಸ್ ನಾಯಕ್ ನರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ತಂದೆ ಮತ್ತು ಆರೋಪಿ ಇಬ್ಬರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪರಸ್ಪರ ಪರಿಚಿತರು.
ಹರಿಯಾಣದ ಜಿಂದ್ ಜಿಲ್ಲೆಯ ನಿದಾನಿ ಗ್ರಾಮದ ನಿವಾಸಿಯಾಗಿರುವ ಸೋಂಬೀರ್ ಪೂನಿಯಾ ಕಳೆದ ನಾಲ್ಕು ವರ್ಷಗಳಿಂದ ಮೀರತ್‌ನ ಆರ್ಡನೆನ್ಸ್ ಘಟಕದಲ್ಲಿ ನೆಲೆಸಿದ್ದಾರೆ. ಸೋಂಬೀರ್ ಮತ್ತು ಅವರ ಕುಟುಂಬ ಫಜಲ್‌ಪುರದ ರಾಜೇಶ್ ಎನ್‌ಕ್ಲೇವ್ ಆರ್ಮಿ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ: ಮೂರು ವರ್ಷದ ವರ್ತಿಕಾ ಈಗ ದುರಂತ ಸಾವಿಗೀಡಾಗಿದ್ದಾಳೆ.
ಸೋಂಬೀರ್ ಅವರ ದೂರಿನ ಪ್ರಕಾರ, ಅಕ್ಟೋಬರ್ 30 ರಂದು, ವರ್ತಿಕಾ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಹಿಮಾಚಲ ಪ್ರದೇಶದ ನಿವಾಸಿ ಮತ್ತು ಮೇಲಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪರಿಚಯಸ್ಥ ಲ್ಯಾನ್ಸ್ ನಾಯಕ್ ನರೇಶ್ ಆಕೆಯನ್ನ ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಸೋಂಬೀರ್ ಅವರ ಪತ್ನಿ ರಿತು ಆರಂಭದಲ್ಲಿ ನಿರಾಕರಿಸಿದ್ದರೂ ಬಳಿಕ ಸಮ್ಮತಿಸಿದ್ದಾರೆ.
ನರೇಶ್ ವರ್ತಿಕಾಳನ್ನ ರೋಹಟಾ ರಸ್ತೆಗೆ ಕರೆದೊಯ್ದು ಕಾರಿನೊಳಗೆ ಒಂಟಿಯಾಗಿ ಬಿಟ್ಟು ಹೋಗಿದ್ದ ಎನ್ನಲಾಗಿದ್ದು, ದುರಂತವೆಂದರೆ ವರ್ತಿಕಾ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ನರೇಶ್ ಬೆಳಿಗ್ಗೆ 10:15 ರ ಸುಮಾರಿಗೆ ಆರ್ಮಿ ಕಾಲೋನಿಯಿಂದ ಬಾಲಕಿಯೊಂದಿಗೆ ಹೊರಟಿದ್ದು, ಆದರೆ ಮಧ್ಯಾಹ್ನ 2:00 ಗಂಟೆಯಾದರೂ ಹಿಂತಿರುಗಿರಲಿಲ್ಲ, ಹೀಗಾಗಿ ಕುಟುಂಬವು ಅವಳನ್ನ ಹುಡುಕಲು ಆರಂಭಿಸಿದ್ದರು. ಅವರು ನರೇಶ್‌ಗೆ ಕರೆ ಮಾಡಿದಾಗ, ಕರ್ತವ್ಯದಲ್ಲಿರುವುದಾಗಿ ಹೇಳಿದ್ದರು. ಸೋಂಬೀರನ ದೂರನ್ನ ಸ್ವೀಕರಿಸಿದ ಕಂಕೇರಖೇಡ ಪೊಲೀಸರು ನರೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.