ಹಾವೇರಿ: ಜಿಲ್ಲೆಯ ಬಂಕಾಪುರದಲ್ಲಿ ಇಂತಹದೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದರು. ಹೀಗಾಗಿ ಅಂತ್ಯಸಂಸ್ಕಾರಕ್ಕೆಂದು ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಊರಿಗೆ ಸಾಗಿಸುವಾಗ ಅಚ್ಚರಿ ಎಂಬಂತೆ ಸತ್ತ ವ್ಯಕ್ತಿ ದಿಢೀರನೆ ಎದ್ದು ಕುಳಿತಿದ್ದಾರೆ.
ಹೌದು, ಆಂಬ್ಯುಲೆನ್ಸ್‌ನಲ್ಲಿ ಪಕ್ಕದಲ್ಲೇ ಕುಳಿತು ಗೋಳಾಡುತ್ತಿದ್ದ ಪತ್ನಿ, ಡಾಬಾ ಸಮೀಪಿಸುತ್ತಿದ್ದಂತೆ ಡಾಬಾದ ಬಳಿ ಊಟ ಮಾಡುತ್ತೀಯ? ಎಂದು ಹೇಳಿ ಕಣ್ಣೀರಿಟ್ಟಿದ್ದಾಳೆ. ಈ ವೇಳೆ ಮೃತ ಗಂಡನಿಗೆ ಜೀವ ಬಂದಿದೆ. ಹೀಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ, ವ್ಯಕ್ತಿ ಬದುಕಿರೋದಾಗಿ ವೈದ್ಯರು ಧೃಡಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಬಂಕಾಪುರದ ಮಂಜುನಾಥ ನಗರದ ನಿವಾಸಿಯಾದ ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್ ಅವರು ಅನಾರೋಗ್ಯದಿಂದ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬಿಷ್ಟಪ್ಪ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಹೀಗಾಗಿ ಮೃತ ಬಿಷ್ಣಪ್ಪ ಅವರ ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಶವವನ್ನು ಆಂಬ್ಯುಲೆನ್ಸ್‌ನಲ್ಲಿ ಬಂಕಾಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಬಂಕಾಪುರ ಹತ್ತಿರ ಬರುತ್ತಿದ್ದಂತೆ ಪತ್ನಿ ಶೀಲಾ ಗೋಳಾಡುತ್ತಾ, “ಡಾಬಾ ಬಂತು ನೋಡು, ಊಟ ಮಾಡುತ್ತೀಯಾ?” ಎಂದು ಪ್ರಶ್ನಿಸಿದ್ದಾಳೆ. ಈ ವೇಳೆ ಬಿಷ್ಟಪ್ಪ ಮತ್ತೆ ಉಸಿರಾಡಲು ಆರಂಭಿಸಿದ್ದಾನೆ.
ಮೃತ ವ್ಯಕ್ತಿ ಎದ್ದು ಕೂರುತ್ತಿದ್ದಂತೆ ತುಸು ಗಾಬರಿಯಾದ ಸಂಬಂಧಿಕರು ಮತ್ತೆ ಶಿಗ್ಗಾವಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ತಪಾಸಣೆ ಮಾಡಿದ ವೈದ್ಯರು ವ್ಯಕ್ತಿ ಬದುಕಿರುವುದಾಗಿ ಧೃಡಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಜತೆಗೆ ಬಿಷ್ಯಪ್ಪನನ್ನು ಅದೇ ಆಂಬ್ಯುಲೆನ್ಸ್‌ನಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಬಿಷ್ಯಪ್ಪನಿಗೆ ಕಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಬಿಷ್ಣಪ್ಪ ಸತ್ತ ಸುದ್ದಿ ಕೇಳಿ ಅವರ ಕುಟುಂಬಸ್ಥರು ಬಂಕಾಪುರದಲ್ಲಿ ಶ್ರದ್ಧಾಂಜಲಿ ಬ್ಯಾನರ್‌ಗಳನ್ನು ಹಾಕಿದ್ದರು. ಮೃತನ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ಕುಟುಂಬಸ್ಥರು, ಆಪ್ತರು, ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು ಎಂದು ತಿಳಿದು ಬಂದಿದೆ.