ಕನ್ನಡ ಚಿತ್ರರಂಗದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ ಆಪ್ತಮಿತ್ರ ಅರ್ಜುನ್ ಕೃಷ್ಣ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜುನ್ ಕೃಷ್ಣ ಅವರು ಇಹಲೋಕದ ಪ್ರಯಾಣ ಮುಗಿಸಿದ್ದಾರೆ. ಕಷ್ಟಪಟ್ಟು ಮಾಡಿದ್ದ ತಮ್ಮ ಮೊದಲ ಸಿನಿಮಾ ತೆರೆಮೇಲೆ ಬರಲು ಇನ್ನೇನು ಎರಡು ಮೂರು ತಿಂಗಳು ಇರುವಾಗಲೇ ಅರ್ಜುನ್ ಕೃಷ್ಣ ಕೊನೆಯುಸಿರೆಳೆದಿದ್ದು, ಇದೊಂದು ಅನ್ಯಾಯದ ಸಾವು ಎಂದು ಆಪ್ತವಲಯ ನೋವು ತೋಡಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಬಾಲ್ಯ ಸ್ನೇಹಿತನಾಗಿರುವ ಅರ್ಜುನ್ ಕೃಷ್ಣ, ಯಶ್ ಹಾಗೂ ರಾಧಿಕಾ ಪಂಡಿತ್ ಆಪ್ತರಾಗಿದ್ದರು. ಮೂಲತಃ ಮೈಸೂರಿನವರಾದ ಅರ್ಜುನ್ ಕೃಷ್ಣ, ಗಾಲ್ ಬ್ಲಾಡರ್ ಸ್ಟೋನ್ ಅಂದರೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು.
ಆಯುರ್ವೇದ ಔಷಧಿ ಪಡೆದುಕೊಳ್ಳುತ್ತಿದ್ದ ಅರ್ಜುನ್ ಕೃಷ್ಣ, ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆ ತಮ್ಮ ಚೊಚ್ಚಲ ಸಿನಿಮಾ ಕೆಲಸದಲ್ಲಿ ಬ್ಯೂಸಿಯಾಗಿದ್ದರು. ಇನ್ನೇನು ತಮ್ಮ ಸಿನಿಮಾ ತೆರೆ ಕಾಣುತ್ತದೆ ಎನ್ನುವ ಉತ್ಸಾಹದಲ್ಲಿದ್ದರು. ಆದರೆ ವಿಧಿಯಾಟವೇ ಬೇರೆ ಆಗಿತ್ತು.
ಅರ್ಜುನ್ ಕೃಷ್ಣ ಅವರಿಗೆ ಫೆಬ್ರವರಿ ತಿಂಗಳಿನಲ್ಲಿ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮೊದಲೇ ಇದ್ದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗಿ ಸೋಂಕು ಫ್ಯಾಂಕ್ರಿಯಾಸ್‌ಗೂ ಹಬ್ಬಿತ್ತು. ಕೂಡಲೇ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಕಳೆದ ತಿಂಗಳ ಶಿವರಾತ್ರಿಯ ಹಿಂದಿನ ದಿನ ಅಂದರೆ, ಫೆಬ್ರವರಿ 25ರಂದು ಅರ್ಜುನ್ ಕೃಷ್ಣ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸೋಂಕು ಉಲ್ಬಣಗೊಂಡು ಬಳಲುತ್ತಿದ್ದ ಅವರು ಕಾರ್ಡಿಯಾಕ್ ಅರೆಸ್ಟನಿಂದ ಕೊನೆಯುಸಿರೆಳೆದಿದ್ದಾರೆ.