ಉತ್ತರ ಪ್ರದೇಶ: ಇಲ್ಲಿನ ಆಗ್ರಾದ ಸಾಂಗಾ ಗ್ರಾಮದಲ್ಲಿ ಭಾರತೀಯ ವಾಯುಪಡೆಯ (Indian Air Force) MiG-29 ಯುದ್ಧ ವಿಮಾನ (MiG-29 fighter jet) ಪತನಗೊಂಡು ಹೊತ್ತಿ ಉರಿದ ಘಟನೆ ನವೆಂಬರ್ 4 ರಂದು ನಡೆದಿತ್ತು. ಇದೀಗ ಯುದ್ಧವಿಮಾನ ಪತನಗೊಂಡು ಕೆಳಗೆ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಿಮಾನ ನಿಯಂತ್ರಣ ಕಳೆದುಕೊಂಡು ಗಿರಕಿ ಹೊಡೆದು ಕೆಳಕ್ಕೆ ಬೀಳುತ್ತಿರುವುದು ಮತ್ತು ಜನ ಗಾಬರಿಗೊಂಡು ಓಡುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ವಿಡಿಯೋದ ಕೊನೆಯಲ್ಲಿ ಪ್ಯಾರಚೂಟ್ ಸಹಾಯದಿಂದ ಪೈಲಟ್ ಇಳಿಯುತ್ತಿರುವ ದೃಶ್ಯವೂ ಸೆರೆಯಾಗಿದೆ. ವಿಮಾನದೊಳಗಿದ್ದ ಪೈಲಟ್ ತಕ್ಷಣ ಜಿಗಿದು ಅಪಾಯದಿಂದ ಪಾರಾಗಿದ್ದಾರೆ.
ಪತನವಾದ ಮಿಗ್ 29 ಫೈಟರ್ ಜೆಟ್ ಸೋಮವಾರ ಪಂಜಾಬ್ನ ಅದಾಂಪುರ ವಾಯು ನೆಲೆಯಿಂದ ಟೇಕ್ ಆಫ್ ಅಗಿ ಆಗ್ರಾದತ್ತ ತೆರಳುತ್ತಿತ್ತು. ಹಾರಾಟದ ವೇಳೆ ತಾಂತ್ರಿಕ ದೋಷ ಕಂಡಿದ್ದರಿಂದ ಪೈಲೆಟ್ ವಿಮಾನವನ್ನು ಕೆಳಗಿಳಿಸಲು ನೋಡಿದ್ದಾರೆ. ಆದರೆ ಅದಾಗಲೇ ವಿಮಾನಕ್ಕೆ ಬೆಂಕಿ ತಗುಲಿತ್ತು ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ಭಾರತೀಯ ವಾಯುಸೇನೆ ಪ್ರತಿಕ್ರಿಯೆ ನೀಡಿದ್ದು ತಾಂತ್ರಿಕ ದೋಷಕ್ಕೆ ಕಾರಣವೇನೆಂದು ತನಿಖೆಗೆ ಆದೇಶ ನೀಡಿದ್ದೇವೆ ಎಂದು ಹೇಳಿದ್ದಾರೆ.