ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ರಾಜ್ಯ ಕಂಡ ಮಹಾನ್ ವ್ಯಕ್ತಿ ಎಂದು ಸ್ಮರಿಸಿದ ಶ್ರೀಗಳು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೂಲಕ ಅವರು ಸಮಾಜದಲ್ಲಿ ಅಚ್ಚಳಿಯ ಛಾಪು ಮೂಡಿಸಿದ್ದರು ಎಂದು ಹೇಳಿದರು. ಹಿರಿಯ ಶಾಸಕರಾಗಿ ಹಾಗೂ ವೀರಶೈವ ಸಮಾಜದ ಪ್ರಮುಖ ನಾಯಕನಾಗಿ ಅವರ ಸೇವೆ ಅಪಾರವಾಗಿದೆ ಎಂದು ಅವರು ನುಡಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ವೀರಶೈವ ಮಹಾಸಭೆಗೆ ದೊಡ್ಡ ನಷ್ಟ ಸಂಭವಿಸಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ಭಗವಂತ ದಯಪಾಲಿಸಲಿ ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಾರ್ಥಿಸಿದ್ದಾರೆ.
ಅನುಭವಸಂಪನ್ನ ಕಾಂಗ್ರೆಸ್ ನಾಯಕ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಹು ಅಂಗಾಂಗ ವೈಫಲ್ಯ ಮತ್ತು ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ ಭಾನುವಾರ (ಡಿಸೆಂಬರ್ 14, 2025) ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಕರ್ನಾಟಕದ ಹಿರಿಯ ಶಾಸಕರಾಗಿದ್ದ ಅವರು, ದೇಶದಲ್ಲಿಯೂ ಹಿರಿಯ ಶಾಸಕರಲ್ಲಿ ಒಬ್ಬರಾಗಿದ್ದರು. ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ವೀರಶೈವ–ಲಿಂಗಾಯತ ಸಮುದಾಯದ ಪ್ರಮುಖ ಹಾಗೂ ಪ್ರಭಾವಶಾಲಿ ನಾಯಕರಾಗಿದ್ದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















