ಯಮಕನಮರಡಿ: ಎಲ್ಲ ದೇಶಗಳ ಸಂಸ್ಕೃತಿಗಳಿಗಿಂತ ಇಡೀ ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿ ಪರಂಪರೆಗೆ ಉನ್ನತ ಸ್ಥಾನವಿದೆ ಎಂದು ಘೊಡಗೇರಿಯ ಶ್ರೀ ಶಿವಾನಂದ ಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಇತ್ತೀಚೆಗೆ ಪರಕನಹಟ್ಟಿ ಗ್ರಾಮದಲ್ಲಿ ಶ್ರೀ ಸಿದ್ದಾರೂಢ ಜಾತ್ರಾ ಮಹೋತ್ಸವದಲ್ಲಿ ಶರೀರವೆಂಬ ಹೊಲನ ಹಸನ ಮಾಡಿ ಎಂಬ ವಿಷಯ ಕುರಿತು ಪ್ರವಚನ ನಿಡಿ ಮಾತನಾಡಿದರು. ನಾವು ಯಂತ್ರ ಯುಗದಲ್ಲಿ ಬದುಕುತ್ತಿದ್ದರೂ ಕೂಡಾ ನಮ್ಮ ಜೀವನದಲ್ಲಿ ಮಂತ್ರಯುಗ ಕೂಡಾ ಅವಶ್ಯಕತೆಯಿದೆ. ಮಂತ್ರ ಪಠಣದಿಂದ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೇ ಆರೋಗ್ಯ ಕೂಡಾ ವೃದ್ದಿಯಾಗುತ್ತದೆ. ನಮ್ಮ ಋಷಿಮುನಿಗಳು ಲೋಕಕಲ್ಯಾಣಕ್ಕಾಗಿ ತಮ್ಮ ಸಂದೇಶಗಳನ್ನು ಬರೆದಿದ್ದಾರೆ. ಪ್ರಚಾರಕ್ಕಾಗಿ ಅಲ್ಲ. ಗ್ರಾಮೀಣ ಭಾಗದ ಜನರು ಆಡುವ ಜನಪದ ಮಾತುಗಳಲ್ಲಿ ಹೃದಯಸ್ಪರ್ಶವಿದೆ. ಮನಸ್ಸು ಕಲುಷಿತಗೊಂಡರೆ ಮಹಾತ್ಮರ ಹಿತವಚನಗಳನ್ನು ಆಲಿಸಿ ಮನಸ್ಸು ಹಸನ ಮಾಡಿಕೊಳ್ಳಬೇಕೆಂದು ಹೇಳಿದರು.
ತೋಲಗಿ ಚಿಕ್ಕಲದಿನ್ನಿಯ ಶ್ರೀ ಅದೃಶ್ಯಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ನೇತ್ರತ್ವ ವಹಿಸಿದ್ದರು. ಹಿರಿಯ ಶಿಕ್ಷಕರಾದ ಶ್ಯಾಮರಾವ ನಾ ಕಿತ್ತೂರ, ಮಲ್ಲಪ್ಪಾ ಪೈರಾಶಿ, ಕೊಣ್ಣೂರಿನ ಪ್ರಕಾಶ ಬಡೇಸ, ಮಾವನೂರ ಗ್ರಾ.ಪಂ. ಪಿಡಿಓ ರಾಜು ಬೆಡಸೂರಿ, ಇವರಿಗೆ ಸತ್ಕರಿಸಲಾಯಿತು. ಶರಣರಾದ ಬಾಳಪ್ಪ ಈರನಟ್ಟಿ ವೇದಿಕೆಯಲ್ಲಿದ್ದರು. ಬಸಯ್ಯಾ ಹಿರೇಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಂಜಾನೆ ಅಭಿಷೇಕ, ಗೀತಾಪಾರಾಯಣ ನಡೆಯಿತು. ಪ್ರತಿವರ್ಷದಂತೆ ಹೋಳಿಗೆಯ ಮಹಾಪ್ರಸಾದ ಜರುಗುತ್ತಿರುವುದು ವಿಶೇಷವಾಗಿದೆ. ಶ್ರೀ ಸಿದ್ದಾರೂಢರ ಮಹಾರಥೋತ್ಸವವು ವಿವಿಧ ವಾಧ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಮಹಾರೋತ್ಸವದಲ್ಲಿ ಎಲ್ಲ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು.