ಬೆಳಗಾವಿ: ಲಿಂಗೈಕ್ಯ ಶಿವಕುಮಾರ ಸಂಬರಗಿಮಠ ಅವರು ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗದುಗಿನ ಜಗದ್ಗುರು ಡಾ.ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ಅವರಿಂದು ಬೆಳಗಾವಿಯಲ್ಲಿ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಶಿವಕುಮಾರ ಸಂಬರಗಿಮಠ ಸಭಾಭವನವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡುತ್ತಿದ್ದರು.
ಮಿತ ಭಾಷಿಯಾಗಿದ್ದ ಶಿವಕುಮಾರ್ ಅವರ ಹಣಕಾಸು ನಿರ್ವಹಣೆ ಅದ್ವಿತೀಯವಾಗಿತ್ತು. ಬೆಳಗಾವಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಮೂಲಧನ ಉಳಿಯುವಂತೆ ಮಾಡಿದ್ದು ಶಿವಕುಮಾರ್ ಸಂಬರಗಿಮಠ ಅವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿತಾಯವಾಗಿದ್ದ 24 ಲಕ್ಷ ರೂಪಾಯಿಗಳನ್ನು ಕನ್ನಡ ಭವನಕ್ಕೆ ಸಿಗುವಂತೆ ಮಾಡಿದ್ದು ಸಂಬರಗಿಮಠ ಅವರು ಎಂದ ಶ್ರೀಗಳು ನಾಗನೂರು ರುದ್ರಾಕ್ಷಿ ಮಠದ ಉತ್ತರಾಧಿಕಾರಿಗಳ ನೇಮಕದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಶಿವಕುಮಾರ್ ಸಂಬರಗಿಮಠ ಅವರು ನೆನಪಿಸಿಕೊಂಡರು. ಅಂದು ರಾಜ್ಯದಲ್ಲಿ ಮೊದಲ ಬಾರಿ ಪ್ರತಿನಿಧಿಗಳಲ್ಲದೆ ಕನ್ನಡ ಸಮ್ಮೇಳನಕ್ಕೆ ಆಗಮಿಸಿದ್ದ ಎಲ್ಲರಿಗೂ ಊಟ ಉಪಹಾರದ ವ್ಯವಸ್ಥೆ ಬೆಳಗಾವಿಯಲ್ಲಿ ಮಾಡಲಾಗಿತ್ತು ಅದೆಲ್ಲವೂ ಸಾರ್ವಜನಿಕರ ವಂತಿಗೆಯಿಂದಲೇ ಆಗಿತ್ತು. ನಂತರದ ವರ್ಷಗಳಲ್ಲಿ ಕನ್ನಡ ಸಮ್ಮೇಳನ ಗಳಿಗೆ ಸರಕಾರ ಹಣ ನೀಡಲಾರಂಬಿಸಿತು ಅಲ್ಲಿ ಸಾರ್ವಜನಿಕರ ಒಳಗೊಳ್ಳುವಿಕೆ ಕಡಿಮೆಯಾಗಿ ಸರ್ಕಾರಿ ಕಾರ್ಯಕ್ರಮವಾಗಿ ಹೋಯಿತು ಎಂದವರು ವಿಷಾದಿಸಿದರು.
ಮುಂಬರುವ ದಿನಗಳಲ್ಲಿ ಸಂಬರಗಿಮಠ ಅವರ ಹೆಸರಿನಲ್ಲಿ ಪದವಿ ಕಾಲೇಜು ಒಂದನ್ನು ಆರಂಭಿಸುವ ಯೋಜನೆ ಶ್ರೀಮಠದ್ದಾಗಿದೆ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮ ಪ್ರಭು ಮಹಾಸ್ವಾಮಿಗಳು ವಹಿಸಿ ಲಿಂಗೈಕ್ಯ ಶಿವಕುಮಾರ್ ಸಂಬರಗಿಮಠ ಅವರ ಅದ್ವಿತೀಯ ಸೇವೆಯನ್ನು ಪರಿಗಣಿಸಿ ಸಭಾಭವನಕ್ಕೆ ಅವರ ಹೆಸರನ್ನು ನಾಮಕರಣ ಗೊಳಿಸಿದ್ದು ಅತ್ಯಂತ ಪ್ರಸ್ತುತವಾಗಿದೆ ಎಂದರು.
ಎಸ್ ಜಿ ಬಿ ಐ ಟಿ ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಡಾ. ಎಫ್. ವಿ. ಮಾನ್ವಿ ಅಧ್ಯಕ್ಷತೆ ವಹಿಸಿದ್ದರು .ಪ್ರಾಚಾರ್ಯ ಬಿ.ಆರ್.ಪಟಗುಂದಿ ಸ್ವಾಗತಿಸಿದರು. ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ಹಿರೇಮಠ ಮತ್ತು ಶ್ರೀಮತಿ ರಾಜೇಶ್ವರಿ ಶಿವಕುಮಾರ್ ಸಂಬರಗಿಮಠ, ಬಸವರಾಜ ರೊಟ್ಟಿ, ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರೊ. ಮಂಜುನಾಥ್ ಶರಣಪ್ಪನವರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಶ್ರದ್ಧಾ ಹಿರೇಮಠ ಪ್ರಾರ್ಥನೆ ಸಲ್ಲಿಸಿದರು.ಪ್ರೊ. ಅನಿತಾ ಪಾಟೀಲ್ ವಂದಿಸಿದರು.