ಬೆಳಗಾವಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರಗುಪ್ಪಿ-ಯಲ್ಲಾಪುರದ ನಮ್ಮೂರ ಬಾನುಲಿ 90.8 ಎಫ್‌ಎಂನಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಪರಿಸರ ಪ್ರೇಮಿ ಶ್ರೀ ದಿಲೀಪ್ ಕಾಮತ್ ಅವರೊಂದಿಗೆ ವಿಶೇಷ ಸಂದರ್ಶನವೊಂದನ್ನು ಆಯೋಜಿಸಲಾಯಿತು. ಆರ್ ಜೆ ಚೇತನ ಈ ಸಂದರ್ಶನ ನಿರ್ವಹಿಸಿದರು.
ಈ ಸಂದರ್ಭದಲ್ಲಿ ದಿಲೀಪ್ ಕಾಮತ್ ಅವರು ತಮ್ಮ ಹೋರಾಟಮಯ ಜೀವನದ ಅನುಭವಗಳನ್ನು ಹಂಚಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀರಂಗ ಕಾಮತ್ ಅವರ ಪುತ್ರರಾಗಿರುವ ಅವರು, ತಮ್ಮ ತಂದೆಯ ಬಗ್ಗೆ ಭಾವಪೂರ್ಣವಾಗಿ ಮಾತನಾಡಿದರು. ಸಾಂಪ್ರದಾಯಿಕ ಬದುಕನ್ನು ತ್ಯಜಿಸಿ, ಕೇವಲ 18ನೇ ವಯಸ್ಸಿನಲ್ಲಿ ಸಾರ್ವಜನಿಕ ಸೇವೆಗೆ ಲೌಕಿಕ ಜೀವನವನ್ನು ಅರ್ಪಿಸಿದರು.
ಗಾಂಧೀಜಿ, ಬರ್ಟ್ರಂಡ್ ರಸೆಲ್ ಹಾಗೂ ಕಾರ್ಲ್ ಮಾರ್ಕ್ಸ್ ಅವರ ಚಿಂತನೆಗಳಿಂದ ಪ್ರೇರಿತರಾಗಿ, ವಿದ್ಯಾರ್ಥಿ ಚಳವಳಿಗಳಲ್ಲಿ ತೊಡಗಿಸಿಕೊಂಡ ಅವರು, ಮಹಾರಾಷ್ಟ್ರದ ಧುಳಿಯಾ ಜಿಲ್ಲೆಯಲ್ಲಿ ಭಿಲ್ ಜನಾಂಗದ ಹಕ್ಕಿಗಾಗಿ ಅಂಬರ್ ಸಿಂಗ್ ಅವರ ಜೊತೆ ಕಾರ್ಯನಿರ್ವಹಿಸಿದರು. ಭಜನ್ ಮೇಳಗಳ ಮೂಲಕ ಜನರನ್ನು ಸಂಘಟಿಸಿ, ಸುಮಾರು 10,000 ಎಕರೆ ಭೂಮಿಯನ್ನು ಭೂಸ್ವಾಮಿಗಳಿಂದ ಹಿಂಪಡೆಯುವಲ್ಲಿ ಯಶಸ್ವಿಯಾದರು.
ಬೆಳಗಾವಿಗೆ ಹಿಂತಿರುಗಿದ ಅವರು, ಕಾರ್ಮಿಕ ಹಕ್ಕುಗಳಿಗಾಗಿ ಹೋರಾಟ ನಡೆಸಿ, ಪವರ್ ಲೂಮ್ ಮತ್ತು ಇಂಡಿಯನ್ ಅಲ್ಯೂಮಿನಿಯಂ ಕಾರ್ಖಾನೆಗಳಲ್ಲಿ ಯೂನಿಯನ್‌ಗಳನ್ನು ಸ್ಥಾಪಿಸಿದರು. ಸಾರ್ವಜನಿಕ ಸಮಸ್ಯೆಗಳಾದ ನೀರಿನ ಕೊರತೆ, ಶಿಸ್ತು, ಸ್ವಚ್ಛತೆ ಇತ್ಯಾದಿಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಖಾನಾಪೂರ ತಾಲ್ಲೂಕಿನ ಮಲಪ್ರಭಾ ನದಿಯ ಅವನತಿಯ ಕುರಿತು ಅವರು ಆತಂಕ ವ್ಯಕ್ತಪಡಿಸಿದರು. ಕಳಸಾ-ಬಂಡೂರಿ ನದಿ ಯೋಜನೆಗಳು ಹಾಗೂ ಮಹದಾಯಿ ಜಲವಿವಾದದ ಬಗ್ಗೆ, ಅವುಗಳಲ್ಲಿನ ರಾಜಕೀಯ ಕುತಂತ್ರ ಮತ್ತು ವೈಜ್ಞಾನಿಕತೆ ಇಲ್ಲದ ನೀತಿಯ ಕುರಿತು ವಿವರಿಸಿದರು.
ಗಾಂಧೀಜಿಯವರ “ಪರಿಸರವು ಮನುಷ್ಯನ ಅವಶ್ಯಕತೆಗಳಿಗೆ ಸಾಕು, ಆದರೆ ಅವನ ದುರಾಸೆಗಳಿಗೆ ಅಲ್ಲ” ಎಂಬ ಉಲ್ಲೇಖವನ್ನು ಪ್ರಸ್ತಾಪಿಸಿ, ತಮ್ಮ ನಿಷ್ಠೆಯ ಹಾದಿಯನ್ನು ವಿವರಿಸಿದರು.
ಅವರ ಕುಟುಂಬದ ಬಗ್ಗೆ ಮಾತನಾಡಿದ ಅವರು, ಪತ್ನಿ ನಿಲಿಮಾ ಕಾಮತ್ ಅವರು ಕಾಲೇಜು ಗ್ರಂಥಪಾಲಕರಾಗಿ ನಿವೃತ್ತರಾದ ಬಗ್ಗೆ ಹಂಚಿಕೊಂಡರು. ಅಲ್ಲದೆ, ತಮ್ಮ ಎಲ್ಲ ಚಟುವಟಿಕೆಗಳಲ್ಲಿ ಸಹಭಾಗಿತ್ವ ವಹಿಸುತ್ತಿರುವ ಅವರ ಪಾತ್ರವನ್ನು ವಿಖ್ಯಾತಪಡಿಸಿದರು.
ಸಂದರ್ಶನದ ಕೊನೆಯಲ್ಲಿ, ವಿಕಾಸದ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ಹಾನಿಯ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿದ ಅವರು, “ಸಾಮಾನ್ಯ ಜನರ ಭಾಗವಹಿಸುವಿಕೆಯಿಂದಲೇ ನೈಜ ಗ್ರಾಮೀಣ ಅಭಿವೃದ್ಧಿ ಸಾಧ್ಯ” ಎಂಬ ಸ್ಪಷ್ಟ ಸಂದೇಶವನ್ನು ಶ್ರೋತೃಗಳಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ದಿಲೀಪ್ ಕಾಮತ್, ನಿಲಿಮಾ ಕಾಮತ್, ಆರ್ ಜೆ ಚೇತನ ಮತ್ತು ನಮ್ಮೂರ ಬಾನುಲಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.