ಚಿಕ್ಕೋಡಿ: ಶೈಕ್ಷಣಿಕ ಜಿಲ್ಲೆಯ ಪ್ರತಿಷ್ಠಿತ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ( ಪ್ರೌಢ ಶಾಲಾ ವಿಭಾಗ ) ದಲ್ಲಿ ಓದುತ್ತಿರುವ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ “ಕಾವ್ಯಗಾಯನ ಮತ್ತು ಪ್ರಬಂಧ ” ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಈ ಸ್ಪರ್ಧೆಯ ಮುಖ್ಯಅತಿಥಿಗಳಾದ ಆರ್. ಎಮ್. ಕಾಂಬಳೆ ಅವರು ಮಾತನಾಡಿ, ಕಾವ್ಯಗಾಯನ ಎಂಬುದು ಸಾಹಿತ್ಯ ಮತ್ತು ಸಂಗೀತದ ಸಂಯೋಜನೆಯಾಗಿ, ಕಾವ್ಯಗಳನ್ನು ಗಾನ ರೂಪದಲ್ಲಿ ಪ್ರಸ್ತುತಪಡಿಸುವ ಪರಂಪರೆ. ಪ್ರಾಚೀನ ಭಾರತದ ಸಂಸ್ಕೃತಿಯ ಪ್ರಮುಖ ಅಂಶವಾಗಿರುವ ಕಾವ್ಯಗಾಯನ, ದರ್ಶನಶಾಸ್ತ್ರ, ಭಕ್ತಿ, ನೈತಿಕತೆ ಮತ್ತು ಜೀವನದ ತತ್ತ್ವಗಳನ್ನು ಸಂಗೀತದ ಮೂಲಕ ವ್ಯಕ್ತಪಡಿಸುವ ಕಲಾ ಶೈಲಿ ಎಂದು ಹೇಳಿದರು.
ಇನ್ನು ಈ ಸ್ಪರ್ಧೆಯ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಉಪಪ್ರಾಚಾರ್ಯರಾದ ಬಿ. ಕೆ. ಕಾಡಪ್ಪಗೋಳ ಅವರು ಮಾತನಾಡಿ, ಪ್ರಬಂಧ ಸ್ಪರ್ಧೆ ಒಂದು ಶೈಕ್ಷಣಿಕ ಹಾಗೂ ಸೃಜನಶೀಲ ಸ್ಪರ್ಧೆಯಾಗಿದ್ದು, ನಿರ್ದಿಷ್ಟ ವಿಷಯದ ಬಗ್ಗೆ ಆಳವಾದ ಅಧ್ಯಯನ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಪ್ರದರ್ಶಿಸಲು ಅವಕಾಶ ನೀಡುತ್ತದೆ. ಪ್ರಬಂಧ ಬರೆಯುವಾಗ ವಸ್ತುಸಂಗ್ರಹ, ನಿರ್ವಹಣಾ ಶೈಲಿ, ವಿಷಯಕ್ಕೆ ತಕ್ಕ ಬಾಂಧವ್ಯ, ಭಾಷಾ ಶುದ್ಧತೆ ಮತ್ತು ಸೃಜನಶೀಲತೆ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಇದು ಅಭಿವ್ಯಕ್ತಿಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಕಾವ್ಯಗಾಯನ ಮತ್ತು ಪ್ರಬಂಧ ಸ್ಪರ್ಧೆಗಳು ಸಂಸ್ಕೃತಿ ಮತ್ತು ಸಾಹಿತ್ಯ ಅಭ್ಯಾಸಕ್ಕೆ ಉತ್ತೇಜನ ನೀಡುತ್ತವೆ. ಶಾಲೆ, ಮಹಾವಿದ್ಯಾಲಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಇಂತಹ ಸ್ಪರ್ಧೆಗಳನ್ನು ಆಯೋಜಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುತ್ತವೆ ಮತ್ತು ಪ್ರೋತ್ಸಾಹಿಸುತ್ತವೆ ಎಂದು ಹೇಳಿದರು.
ಈ ಸ್ಪರ್ಧೆಯ ನಿರ್ಣಾಯಕರ ಸ್ಥಾನವನ್ನು ಎಸ್. ಆರ್. ಗಲಗಲಿ, ವೀಣಾ. ಸರಿಕರ ಮತ್ತು ಕವಿತಾ. ಬಾರಡ್ಡಿ ಅವರು ವಹಿಸಿಕೊಂಡು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಿದರು.
ಎಸ್. ಎಸ್. ಕುರಣೆ. ಶ್ರೀಮತಿ. ಹೆಚ್. ಬಿ. ಢವಳೇಶ್ವರ. ಆರ್. ಕೆ. ಕಳಸನ್ನವರ. ಸಿ. ಎಸ್. ಮೋಟೆಪ್ಪಗೋಳ. ರಮೇಶ.ಬಿರಾದಾರ. ಶ್ರೀಮತಿ.ಕವಿತಾ. ಬಾರಡ್ಡಿ. ಶ್ರೀಮತಿ. ಜ್ಯೋತಿ. ಬಂಡಿವಡ್ಡರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.