ಮೂಡಲಗಿ: ತಾಲೂಕಿನ ಶಿವಾಪುರ ಗ್ರಾಮದಲ್ಲಿರುವ ಪ್ರಸಿದ್ಧ ಅಡವಿಸಿದ್ಧೇಶ್ವರ ಮಠದಲ್ಲಿ ನಿನ್ನೆ ರಾತ್ರಿ ಭಾರೀ ಗೊಂದಲ ನಡೆದಿದೆ. ಮಠದ ಸ್ವಾಮೀಜಿ ಅಡವಿಸಿದ್ಧರಾಮ ಅವರು ನಿಗೂಢ ರೀತಿಯಲ್ಲಿ ಮಹಿಳೆಯೊಬ್ಬರ ಜೊತೆಗೆ ಇರುವಾಗ ಸ್ಥಳೀಯರ ಕೈಗೆ ‘ರೆಡ್ ಹ್ಯಾಂಡ್’ ಆಗಿ ಸಿಕ್ಕಿಬಿದ್ದಿರುವ ಘಟನೆ ಭಾರೀ ಸದ್ದು ಮಾಡಿದೆ.
ರಾತ್ರಿ ವೇಳೆ ಮಠದ ಆವರಣದಲ್ಲಿ ಶಂಕಿತ ಚಟುವಟಿಕೆ ನಡೆಯುತ್ತಿರುವುದನ್ನು ಗಮನಿಸಿದ ಕೆಲವು ಯುವಕರು ಸ್ವಾಮೀಜಿಯ ಕೋಣೆಯವರೆಗೂ ಹೋಗಿದ್ದಾರೆ. ಅಲ್ಲಿ ಸ್ವಾಮೀಜಿ ಹಾಗೂ ಮಹಿಳೆ ಇರುವ ದೃಶ್ಯ ಕಂಡುಬಂದ ತಕ್ಷಣ, ಈ ಮಾಹಿತಿ ಊರಿಗೆರಗಿದ್ದು, ನೂರಾರು ಗ್ರಾಮಸ್ಥರು ಮಠಕ್ಕೆ ಧಾವಿಸಿದರು. ಬಳಿಕ ಸ್ಥಳೀಯರು ಸ್ವಾಮೀಜಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಾಟೆ ತೆಗೆದುಕೊಂಡಿದ್ದಾರೆ.
ಸ್ಥಳೀಯರು ಸ್ವಾಮೀಜಿಗೆ ಅನಾಚಾರದ ಆರೋಪ ಹಾಕಿದ್ದು, ಮಠದಲ್ಲಿ ಇಂತಹ ನಡೆ ಪರಮಪವಿತ್ರ ಸ್ಥಳದ ಮಾನ ಹರಾಜಾಗಿಸುವಂತದ್ದು ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಮೂಡಲಗಿ ಪೊಲೀಸ್ ಠಾಣೆಗೆ ತಿಳಿದುಬಂದಾಗ, ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಮೃತ್ಯುಂಜಯ ನೇತೃತ್ವದ ಪೊಲೀಸರ ತಂಡ ಮಹಿಳೆಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಿದೆ.
ಈ ಘಟನೆ ಸಂಬಂಧಿಸಿದಂತೆ ಬಳಿಕ ಮಠದ ಆವರಣದಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಮಧ್ಯೆ ಸಭೆ ನಡೆದಿದ್ದು, ಅಡವಿಸಿದ್ಧರಾಮ ಸ್ವಾಮೀಜಿಯು ಯಾವುದೇ ಕಾರಣಕ್ಕೂ ಮಠದಲ್ಲಿ ಮುಂದುವರಿಯಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಲವಾದ ವಿರೋಧದ ಬೆನ್ನಲ್ಲೇ, ಅಡವಿಸಿದ್ಧರಾಮ ಸ್ವಾಮೀಜಿ ಮಠವನ್ನು ತೊರೆದು ತೆರಳಿದ್ದಾರೆ.
ಪಾಲಕರು ಮತ್ತು ಸ್ಥಳೀಯ ಸಮಾಜದ ಮುಖಂಡರು ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಈ ಘಟನೆ ಮಠದ ಗೌರವ ಹಾಗೂ ಧರ್ಮಸಂಸ್ಥೆಯ ನಂಬಿಕೆಗೆ ಗಂಭೀರ ಹಾನಿ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.