ಮೈಸೂರು: ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ. ತನ್ನ ಚಟುವಟಿಕೆಯ ಭಾಗವಾಗಿ ೧೬ರಿಂದ ೩೨ವರ್ಷದ ಒಳಗಿನ ಆಸಕ್ತ ಯುವಕ ಯುವತಿಯರಿಗೆ ಒಂದು ವರ್ಷದ ವಸತಿ ರಹಿತ ರಂಗಭೂಮಿ ಡಿಪ್ಲೊಮಾ ಕೋರ್ಸ್ ಅನ್ನು ನಡೆಸುತ್ತಿದ್ದು, ಕಳೆದ ಅನೇಕ ವರ್ಷಗಳಿಂದ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿ ನಟನ ರಂಗಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಟನ ರಂಗಶಾಲೆಯಲ್ಲಿ ತರಬೇತಿ ಪಡೆದ ಸುಮಾರು ೫೦೦ಕ್ಕೂ ಹೆಚ್ಚು ಕಲಾವಿದರು ದೇಶದಾದ್ಯಂತ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
೨೦೨೫-೨೬ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಸಂದರ್ಶನ(ಆಡಿಷನ್) ದಿನಾಂಕ ೨೫.೦೫.೨೦೨೫ ರಂದು ಬೆಳಿಗ್ಗೆ ೧೦ ಗಂಟೆಗೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ ೫.೩೦ರಿಂದ ೯ರ ವರೆಗೆ ತರಗತಿಗಳು ನಡೆಯಲಿದ್ದು, ಅಭಿನಯ, ರಂಗ ಸಿದ್ಧಾಂತ, ರಂಗ ಸಂಗೀತ, ಆಂಗಿಕ ಚಲನೆ, ಪ್ರಸಾಧನ, ಬೆಳಕು, ರಂಗ ವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ಪ್ರದರ್ಶನ.. ಹೀಗೆ ರಂಗಭೂಮಿಯ ಬೇರೆ ಬೇರೆ ಆಯಾಮಗಳ ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದೆ.
ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ದಿನಾಂಕದಂದೇ ಸಂದರ್ಶನದಲ್ಲಿ ಭಾಗವಹಿಸತಕ್ಕದ್ದು. ರಂಗಭೂಮಿಯನ್ನು ಗಂಭೀರವಾಗಿ ಅಭ್ಯಸಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್(www.natanamysuru.org) ಅಥವಾ ಕಛೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ಅಂಚೆ ಮುಖಾಂತರ ಅಥವಾ ನೇರವಾಗಿ ತಲುಪಿಸತಕ್ಕದ್ದು. ಆಡಿಷನ್ ಮತ್ತು ಪ್ರವೇಶಾತಿ ಕುರಿತ ಸೂಚನೆಗಳು ಮತ್ತು ಹೆಚ್ಚಿನ ಮಾಹಿತಿಗಳು ವೆಬ್‌ಸೈಟ್ ಅಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ೭೨೫೯೫೩೭೭೭೭, ೯೪೮೦೪೬೮೩೨೭, ೯೮೪೫೫೯೫೫೦೫ ಸಂಪರ್ಕಿಸಿ.