ಆಂಬ್ಯುಲೆನ್ಸ್ ಗೆ ದಾರಿ ಬಿಡಲು ಹೋಗಿ ಸಿನಿಮೀಯ ರೀತಿಯಲ್ಲಿ ಕಾರು ಪಲ್ಟಿ
ಬೆಂಗಳೂರ: ಫ್ಲೈಓವರ್‌ಗಳಲ್ಲಿ ಹಾಗೂ ರಸ್ತೆಗಳಲ್ಲಿ ಸಂಚರಿಸುವಾಗ ಆಂಬ್ಯುಲೆನ್ಸ್ ನಂತರ ತುರ್ತು ವಾಹನಗಳಿಗೆ ಜಾಗ ಕೊಡುವುದು ಎಲ್ಲ ನಾಗರಿಕರ ಕರ್ತವ್ಯವಾಗಿರುತ್ತದೆ. ಇದೇ ರೀತಿ ಸೈರನ್ ಹಾಕಿಕೊಂಡು ತುರ್ತಾಗಿ ಬರುತ್ತಿದ್ದ ಆಂಬ್ಯುಲೆನ್ಸ್‌ಗೆ ದಾರಿ ಬಿಡಲು ಮುಂದಾದ ಕಾರೊಂದು ಬುಡಮೇಲಾಗಿ ಉರಳಿದ ಘಟನೆ ಬೆಂಗಳೂರಿನ ಫ್ಲೈಓವರ್ ಮೇಲೆ ಸೋಮವಾರ ನಡೆದಿದೆ.
ಹೌದು, ಬೆಂಗಳೂರಿನ ಅತೀ ಉದ್ದನೆಯ ಮೇಲ್ಸೇತುವೆ (ಫ್ಲೈ ಓವರ್) ಎನ್ನಲಾಗುವ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಒವರ್‌ನ ಮೇಲೆ ಈ ದುರ್ಘಟನೆ ನಡೆದಿದೆ. ಹಿಂದಿನಿಂದ ಸೈರನ್ ಹಾಕಿಕೊಂಡು ವೇಗವಾಗಿ ಆಂಬುಲೆನ್ಸ್ ಬರುತ್ತಿತ್ತು. ಈ ವೇಳೆ ಆ ಆಂಬುಲೆನ್ಸ್‌ಗೆ ದಾರಿ ಬಿಡಲು ಮುಂದಾದ ಕಾರು ಚಾಲಕನೊಬ್ಬ ಕಾರನ್ನು ತುಸು ಎಡಕ್ಕೆ ತಿರುಗಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಕಾರು ಪಲ್ಟಿಯಾಗಿದೆ.
ಮುಂದೆ ಫ್ಲೈಓವರ್ ಮೇಲೆ ಕಾರು ಚಲಿಸುತ್ತಿತ್ತು. ಹಿಂದಿನಿಂದ ಆಂಬ್ಯುಲೆನ್ಸ್ ವೇಗವಾಗಿ ಆಗಮಿಸಿದ್ದನ್ನು ಮುಂದಿದ್ದ ಕಾರಿನ ಚಾಲಕ ಗಮನಿಸಿದ್ದಾನೆ. ಕೂಡಲೇ ದಾರಿ ಬಿಡಲು ಮುಂದಾದಾಗ ಕಾರು ಫ್ಲೈಓವರ್ ಎಡ ತಡೆಗೋಡೆಗೆ ಏರಿದ ಕಾರು ಮುಗುಚಿ ರಸ್ತೆ ಮಧ್ಯೆ ಉರಳಿ ಬಿದ್ದಿದೆ. ನೋಡು ನೋಡುತ್ತಿದ್ದಂತೆ ಘಟನೆ ಸಂಭವಿಸಿದ್ದು, ಕೆಲ ಹೊತ್ತು ಈ ಫ್ಲೈಓವರ್ ಮಾರ್ಗದ ಸವಾರರು ಆತಂಕಗೊಂಡರು.
ಇದೆಲ್ಲ ಘಟನೆಯು ಕಾರು ಮತ್ತು ಆಂಬ್ಯುಲೆನ್ಸ್ ಗಳಿಗಿಂತ ಮುಂದೆ ಹೊರಟಿದ್ದ ಕಾರಿನಿಂದ ಮಾಡಲಾದ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿನಿಮೀಯ ರೀತಿಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರು ಫ್ಲೈಓವರ್ ಮೇಲಿನ ರಸ್ತೆಯಲ್ಲಿಯೇ ಬಿದ್ದಿದೆ. ಒಂದು ವೇಳೆ ಕಾರು ಪ್ಲೈಓವರ್ ಕಳಗೆ ಬಿದ್ದಿದ್ದರೆ ದೊಡ್ಡ ದುರಂತವೇ ಸಂಭವಿಸಿ ಬಿಡುತ್ತಿತ್ತು.
ಅಲ್ಲದೇ ನಾಲ್ಕಾರು ಜೀವಗಳ ಹಾನಿಯು ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.
ಈ ಘಟನೆ ಸೋಮವಾರ ಸಂಜೆ 5.30 ಗಂಟೆಗೆ ನಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಕಾರಿನಲ್ಲಿದ್ದವರಿಗಾಗಲಿ, ಇಲ್ಲವೇ ಕಾರಿನ ಹಿಂದೆ ಮುಂದೆ ಬರುತ್ತಿದ್ದ ಸವಾರರಿಗಾಗಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಬೇರೆ ಆಂಬುಲೆನ್ಸ್ ಕರೆಸಿ ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕೆಲಹೊತ್ತು ಸಂಚಾರ ದಟ್ಟಣೆಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಗೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ದೌಡಾಯಿಸಿದ್ದು, ಪರಿಶೀಲಿಸಿದ್ದಾರೆ. ಮೇಲ್ಸೇತುವೆ ಮೇಲೆ ಕಾರು ಉರುಳಿ ಬಿದ್ದ ಪರಿಣಾಮ ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಯಿತು. ನಿಧಾನಗತಿಯ ಸಂಚಾರ ಕಂಡು ಬಂತು. ನಂತರ ಘಟನಾ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಯಿತು. ಕಾರನ್ನು ರಸ್ತೆ ಬದಿಗೆ ತಳ್ಳಿ ಬೇರೆಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.