ಬೆಳಗಾವಿ: ಚೀನಾ ಹಾಗೂ ಕೊರಿಯಾದಂತಹ ದೇಶಗಳಿಂದ ಆಮದು ಮಾಡುತ್ತಿದ್ದ ಮಕ್ಕಳ ಆಟಿಕೆಗಳು ಇನ್ನು ಮುಂದೆ ಬೆಳಗಾವಿಯಲ್ಲಿಯೇ ತಯಾರಾಗಲಿವೆ. ಆತ್ಮನಿರ್ಭರ ಭಾರತ ಅಭಿಯಾನದಡಿ ಈ ಮಹತ್ವದ ಹೆಜ್ಜೆಯು ಭಾರತೀಯ ಆಟಿಕೆ ಉದ್ಯಮಕ್ಕೆ ಹೊಸ ತಿರುವು ನೀಡಿದೆ.

ಬೆಳಗಾವಿಯ ರಾಮತೀರ್ಥನಗರದಲ್ಲಿ ಉದ್ಯಮಿ ಚೈತನ್ಯ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಅವರ ಪತ್ನಿ ರೇಣು ಕುಲಕರ್ಣಿ ಅವರು ಎಆರ್ ಟಾಯ್ಸ್ & ಟೆಕ್ನಿಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಎಂಬ ಹೆಸರಿನಲ್ಲಿ ಹೊಸ ಆಟಿಕೆ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದಾರೆ. ಆಟಿಕೆಯ ಎಲ್ಲ ಭಾಗಗಳನ್ನು ಸ್ಥಳೀಯವಾಗಿ ತಯಾರಿಸಿ, ತೊಡಗಿಸಿ, ಮಾರುಕಟ್ಟೆಗೆ ತರುತ್ತಿರುವ ಈ ಘಟಕ ಸಂಪೂರ್ಣವಾಗಿ ಸ್ವದೇಶಿ ಮಾದರಿಯಾಗಿದೆ.
ಇದಕ್ಕೆ ಪೂರಕವಾಗಿ, ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿರುವ ‘ಮೀರಾ ರೆಸಿಡೆನ್ಸ್’ ಅಪಾರ್ಟ್‌ಮೆಂಟ್ ಆವರಣದಲ್ಲಿ ದೇಶದ ಮೊದಲ ‘ಕಿಡ್ಡೋಕ್ರಾಫ್ಟ್’ ಆನ್‌ಲೈನ್ ಆಟಿಕೆ ಅಂಗಡಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸುರೇಶ ಅಂಗಡಿ ಎಜುಕೇಶನ್ ಫೌಂಡೇಶನ್‌ನ ನಿರ್ದೇಶಕಿ ಸ್ಪೂರ್ತಿ ಅಂಗಡಿ ಪಾಟೀಲ್ ಅವರು ‘ಕಿಡ್ಡೋಕ್ರಾಫ್ಟ್’ ವೆಬ್‌ಸೈಟ್‌ನ ಕರಪತ್ರ ಬಿಡುಗಡೆ ಮಾಡಿ, ಅಧಿಕೃತವಾಗಿ ವೆಬ್‌ಸೈಟ್ ಲಾಂಚ್ ಮಾಡಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ರೇಣು ಕುಲಕರ್ಣಿ ಅವರು ಮಾತನಾಡಿ, “ಮಕ್ಕಳಿಗೆ ಸುರಕ್ಷಿತ, ಗುಣಮಟ್ಟದ ಹಾಗೂ ಶೈಕ್ಷಣಿಕ ಮೌಲ್ಯದ ಆಟಿಕೆಗಳನ್ನು ನವೀನ ವಿನ್ಯಾಸದಲ್ಲಿ ಸ್ಥಳೀಯವಾಗಿ ತಯಾರಿಸಲಾಗುತ್ತಿದೆ. ನಾವು ‘ಕಿಡ್ಡೋಕ್ರಾಫ್ಟ್’ ಎಂಬ ಬ್ರ್ಯಾಂಡ್ ಮೂಲಕ ದೇಶದಾದ್ಯಂತ ಈ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಪೂರೈಸುವ ಉದ್ದೇಶ ಹೊಂದಿದ್ದೇವೆ” ಎಂದು ತಿಳಿಸಿದ್ದಾರೆ.
ಈ ವೆಬ್‌ಸೈಟ್ ವಿನ್ಯಾಸವನ್ನು ನಿತ್ಯಾ ಉದೋಶಿ ಅವರು ನಿರ್ವಹಿಸಿದ್ದು, ಈ ಪ್ರಯತ್ನದ ಮೂಲಕ ಸ್ಥಳೀಯ ಉದ್ಯಮ, ಮಹಿಳಾ ಉಧ್ಯಮಶೀಲತೆ ಹಾಗೂ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಮಹತ್ವದ ಉತ್ತೇಜನ ದೊರೆತಂತಾಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143