Live Stream

[ytplayer id=’22727′]

| Latest Version 8.0.1 |

Local NewsState News

ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಜಯಂತಿ: ಬೆಳಗಾವಿಯಲ್ಲಿ ಅರ್ಥಪೂರ್ಣ ಆಚರಣೆ

ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಜಯಂತಿ: ಬೆಳಗಾವಿಯಲ್ಲಿ ಅರ್ಥಪೂರ್ಣ ಆಚರಣೆ

 

ಬೆಳಗಾವಿ: ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜಯಂತಿಯನ್ನು ಮಹಾಂತೇಶನಗರದ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ವಚನ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಚೇತನ ಹಳಕಟ್ಟಿ ಅವರ ಜ್ಞಾನಜ್ಯೋತಿಯನ್ನು ಸ್ಮರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ಅವರು ವಚನ ಪ್ರಾರ್ಥನೆ ನೆರವೇರಿಸಿದರು. ನಂತರ, ಡಾ. ಫ.ಗು. ಹಳಕಟ್ಟಿ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ಬೆಳಗಾವಿ ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಬಸವ ತತ್ವ ಅನುಭವ ಕೇಂದ್ರ ಬೆಳಗಾವಿಯ ಪೂಜ್ಯ ವಾಗ್ದೇವಿ ತಾಯಿಯವರು ಡಾ. ಫ.ಗು. ಹಳಕಟ್ಟಿ ಅವರ ಜೀವನ ಸಂದೇಶ ಕುರಿತು ಅನುಭಾವ ನೀಡಿದರು. ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸಿ ಪ್ರಕಟಿಸುವ ಮೂಲಕ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ ಪಿತಾಮಹ ಎಂದು ಬಣ್ಣಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಹಳಕಟ್ಟಿ ಅವರು, ಹಾಲಬಾವಿ ಅವರ ಮನೆಯಲ್ಲಿ ದೊರೆತ ಹಳೆಯ ಗ್ರಂಥಗಳು ಮತ್ತು ತಾಡೋಲೆಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ವಿವಿಧ ಗ್ರಾಮಗಳಿಂದಲೂ ತಾಡೋಲೆಗಳನ್ನು ಸಂಗ್ರಹಿಸಿ ವಚನ ಸಾಹಿತ್ಯಕ್ಕೆ ಅಕ್ಷರ ರೂಪ ನೀಡಿದ ಅವರ ಸೇವೆ ಅನನ್ಯ ಎಂದು ಸ್ಮರಿಸಲಾಯಿತು.

ಬೆಳಗಾವಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದ ಹಳಕಟ್ಟಿ ಅವರು ನಂತರ ವಿಜಯಪುರಕ್ಕೆ ತೆರಳಿದರು. ನ್ಯಾಯಾಲಯದ ಹೊರಗೆ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಮೂಲಕ ಜನರಿಗೆ ನೆರವಾಗುತ್ತಿದ್ದರು. ಅವರ ಶುಲ್ಕವಾಗಿ ತಾಡೋಲೆಗಳನ್ನು ಕೇಳಿ ಪಡೆಯುತ್ತಿದ್ದ ಅವರ ವಿನೂತನ ವಿಧಾನವನ್ನು ವಾಗ್ದೇವಿ ತಾಯಿಯವರು ವಿವರಿಸಿದರು. ಅನೇಕ ಸಹಕಾರ ಸಂಘಗಳನ್ನು ಸ್ಥಾಪಿಸಲು ಪ್ರೇರಣೆ ನೀಡಿದ ಹಳಕಟ್ಟಿ ಅವರು, ಸಿದ್ದೇಶ್ವರ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳನ್ನು ನೋಂದಾಯಿಸಲು ನೆರವಾದರು. ಅಲ್ಲದೆ, ಶಾಲೆಗಳನ್ನು ಪ್ರಾರಂಭಿಸಿ ಕನ್ನಡ ಭಾಷೆ ಮತ್ತು ಕನ್ನಡ ಅಂಕಿಗಳನ್ನು ಬಳಸಿ ಲೆಕ್ಕಪತ್ರ ಬರೆಯಲು ಪ್ರೋತ್ಸಾಹಿಸಿದರು. ಬಿ.ಎಲ್.ಡಿ. ಸಂಸ್ಥೆ ಸ್ಥಾಪನೆಗೂ ಅವರು ಪ್ರೇರಣೆ ನೀಡಿದರು ಮತ್ತು ಅನೇಕ ಪುಸ್ತಕಗಳನ್ನು ಪ್ರಕಟಿಸಿದರು.

ಪೂಜ್ಯ ಕುಮುದಿನಿ ತಾಯಿಯವರು ವಚನಗಳನ್ನು ರಾಗಬದ್ಧವಾಗಿ ಹಾಡಿ ನೆರೆದವರ ಮನ ಸೂರೆಗೊಂಡರು. ಶರಣ ಮಹಾಂತೇಶ ತೊರಣಗಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶರಣೆ ಕಮಲಾ ಗಣಾಚಾರಿ ದಾಸೋಹ ಸೇವೆಯಲ್ಲಿ ತೊಡಗಿಕೊಂಡಿದ್ದರು.

ಅಕ್ಕಮಹಾದೇವಿ ತೆಗ್ಗಿ, ಸುಜಾತಾ ಮತ್ತಿಕಟ್ಟಿ, ಜಯಶ್ರೀ ಚಾವಲಗಿ, ಸುವರ್ಣ ಗುಡಸ, ಜಾಹ್ನವಿ ಘೋರ್ಪಡೆ, ವಿದ್ಯಾ ಕರ್ಕಿ, ಸದಾಶಿವ ದೇವರಮನಿ, ಬಸವರಾಜ ಕರಡಿಮಠ, ಶಿವಪುತ್ರಯ್ಯ ಪೂಜಾರ, ಶಂಕರ ರಾವಳ, ಬಾಬಣ್ಣ ತಿಗಡಿ ದಂಪತಿಗಳು, ಮಹದೇವ ಕೆಂಪೇಗೌಡರ, ಶೇಖರ ವಾಲಿ ಇಟಗಿ, ಮಹಾಂತೇಶ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಗುರುಸಿದ್ದಪ್ಪ ರೇವಣ್ಣವರ, ಗದಿಗೆಪ್ಪ ತಿಗಡಿ, ಶಂಕರ ಗುಡಸ, ಸಿ.ಎಂ. ಬೂದಿಹಾಳ, ಬಸವರಾಜ ಬಿಜ್ಜರಗಿ, ಶಿವಾನಂದ ತಲ್ಲೂರ, ಅ.ಬ. ಇಟಗಿ, ಶಿವಾನಂದ ನಾಯಕ ಸೇರಿದಂತೆ ಅನೇಕ ಶರಣ ಶರಣೆಯರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಗಮೇಶ ಅರಳಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";