ಗುರು ಎಂಬ ಪದ ಕೇಳಿದಾಗ ನಮ್ಮ ಮನಸ್ಸಿಗೆ ಗೌರವ, ಶ್ರದ್ಧೆ ಮತ್ತು ಅಧ್ಯಾತ್ಮದ ಭಾವನೆ ಬರುತ್ತದೆ. ಆದರೆ ಈ ಪವಿತ್ರ ಪದದ ಮೂಲ ಏನು? ಇಂತಹ ಶ್ರದ್ಧಾಸ್ಪದ ಪದವನ್ನು ಯಾರು ಸೃಷ್ಟಿಸಿದರು? ಏಕೆ ಸೃಷ್ಟಿಸಿದರು? ಈ ಪ್ರಶ್ನೆಗಳಿಗೆ ಶ್ರೀ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರು ಬಹಳ ಸರಳ, ಆದರೆ ಆಳವಾದ ಉತ್ತರವನ್ನು ನೀಡಿದ್ದಾರೆ.
ಆದಿಕಾಲದಲ್ಲಿ, ಜ್ಞಾನವಂತರು, ಅಧ್ಯಾತ್ಮಜ್ಞಾನದಲ್ಲಿ ನಿರತರಾದ ಶರಣರು, ಸಂತರನ್ನು ನಾಗರಿಕರು ಗೌರವದಿಂದ ನೋಡುತ್ತಿದ್ದರು. ಅವರು ಆ ಜ್ಞಾನಿಯ ವ್ಯಕ್ತಿತ್ವವನ್ನು ಜಾತಿಯಿಂದ ಅಳೆಯದೆ, ಅವರ ಜ್ಞಾನದಿಂದ ಅಳೆಯುತ್ತಿದ್ದರು. ಜ್ಞಾನವೇ ಅವರ ಗುರುತ್ವಕ್ಕೆ ಆದಾರವಾಗಿತ್ತು. ಆದರೆ ಕಾಲ ಕ್ರಮೇಣ ಭಾರತದಲ್ಲಿ ಜ್ಞಾನಿಗಿಂತಲೂ ಹೆಚ್ಚು ಅವರ ಜಾತಿಯನ್ನೇ ಗಮನಿಸುವ ಪ್ರವೃತ್ತಿ ಬೆಳೆಯಿತು.
ಈ ಅಂಶವನ್ನು ಅರಿತ ನಮ್ಮ ಸನಾತನ ಸಂಸ್ಕೃತಿಯ ಪೂರ್ವಜರು, ಎಲ್ಲರಿಗೂ ಸಮಾನ ಗೌರವ ಸಿಗಬೇಕು, ಜ್ಞಾನವೇ ಮೊದಲು ಎನ್ನುವ ಧೋರಣೆಯುತ ಸಮಾಜ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ “ಗುರು” ಎಂಬ ಪದವನ್ನು ರೂಪಿಸಿದರು. ಈ ಪದವು ಯಾವುದೇ ಜಾತಿ, ವರ್ಣ, ಲಿಂಗ ಅಥವಾ ಭಾಷೆಯನ್ನು ಅವಲಂಬಿಸದೇ, ಶುದ್ಧ ಜ್ಞಾನಕ್ಕೇ ಪ್ರತೀಕವಾಗಿತ್ತು. ಗುರು ಎಂದರೆ ಕತ್ತಲೆಯನ್ನೆ ದೂರ ಮಾಡುವವನು. ಗು = ಅಂಧಕಾರ, ರು = ನಾಶಕ ಎಂಬ ವ್ಯಾಖ್ಯಾನವು ಇದಕ್ಕೆ ದೃಷ್ಟಾಂತ.
ಈ ಪದದ ಉಪಯೋಗದಿಂದ, ಸಮಾಜದಲ್ಲಿ ಜ್ಞಾನವನ್ನು ಒಟ್ಟಾಗಿ ವಂದನೆ ಮಾಡುವ ಭಾವನೆ ಮೂಡಿತು. ಗುರುಪೂರ್ಣಿಮೆಯಂತಹ ಆಚರಣೆಗಳು ಸಹ ಈ ಸಂಸ್ಕೃತಿಗೆ ಬೆಳಕು ಹರಡಿದವು. ಎಲ್ಲರೂ ಒಂದೇ ವೇದಿಕೆಯಲ್ಲಿ ಗುರುಗಳನ್ನು ಗೌರವದಿಂದ ಪೂಜಿಸುವ ಸಂಪ್ರದಾಯ ಮೂಡಿಬಂದಿತು. ಇದರಿಂದ ಜ್ಞಾನಕ್ಕೆ ನೀಡಲಾದ ಆದ್ಯತೆ ಹಾಗೂ ಸಮಾನತೆ ಎಂಬ ಸಂಸ್ಕೃತಿಯ ಮೌಲ್ಯಗಳು ಶ್ರದ್ಧೆಯಿಂದ ಉಳಿಯಲಾರಂಭಿಸಿದವು.
ಆದರೆ ಈ ಕಾಲಘಟ್ಟದಲ್ಲಿ, ಪುನಃ ನಾವು ಗುರುವನ್ನೂ ಜಾತಿಯಿಂದ ವಿಂಗಡಿಸುವ ತೊಂದರೆಗೂಡಿಸಿದ್ದೇವೆ. “ಈ ಗುರು ನಮ್ಮ ಜಾತಿಯವರು”, “ಅವರು ಅವರ ಜಾತಿಯವರು” ಎಂಬ ರೀತಿಯ ಹುಚ್ಚು ಕಲ್ಪನೆಗಳು, ಭಕ್ತಿ ಮತ್ತು ಶ್ರದ್ಧೆಗೆ ಅಡ್ಡಿಯಾಗುತ್ತಿವೆ. ಭಕ್ತಿಯಿಂದ ಗುರುವನ್ನು ನೋಡಬೇಕೆಂಬ ಬದಲಿಗೆ, ಗುರುಗಳನ್ನೂ ಜಾತಿ ಅಥವಾ ಗುಂಪುಗಳ ಮೂಲಕ ವಿಭಜಿಸುವ ಅನಾರೋಗ್ಯಕರ ಮನೋಭಾವ ಬೆಳೆಯುತ್ತಿದೆ.
ಈ ಬಗ್ಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಎಚ್ಚರಿಕೆಯಿಂದ ಎತ್ತಿಹಿಡಿದಿರುವುದು ಅತಿ ಮಹತ್ವದ್ದು. ಅವರು ಸದಾ ಒತ್ತಾಯಿಸುತ್ತಿದ್ದರು: ಗುರು ಎಂಬ ಪದ ಜ್ಞಾನವಂತನಿಗೆ ಮಾತ್ರ ಸಲ್ಲಬೇಕು, ಜಾತಿಯಿಂದಲ್ಲ. ಎಲ್ಲಾ ಗುರುಗಳನ್ನು ಒಂದೇ ಭಾವದಿಂದ ನೋಡಬೇಕು. ಅಷ್ಟೇಅಲ್ಲ, ಅದರಲ್ಲಿ ನಿಜವಾದ ಭಕ್ತಿಯ ಅರ್ಥವಿದೆ, ಅದರಲ್ಲಿ ಸಮಾನತೆಯ ಅರ್ಥವಿದೆ.
ನಾವು ನಂಬಬೇಕಾದ ಪರಮಸತ್ಯವೇನೆಂದರೆ – ಜ್ಞಾನವೆಂದರೆ ಎಲ್ಲರಿಗೂ ಹೊಂದಿರುವ ಸಾಮೂಹಿಕ ಸಂಪತ್ತು. ಗುರು ಎಂಬ ಪದ ಜಾತಿಯ ಕಂಬದೊಳಗೆ ಅಡಗಿಸದಿರಿ. ಅದನ್ನು ಜ್ಞಾನದಿಂದ, ಶ್ರದ್ಧೆಯಿಂದ, ಸಮಾನತೆಯಿಂದ ಕಂಡು ಭಕ್ತಿಯಿಂದ ಪೂಜಿಸಬೇಕು. ಆಗ ಮಾತ್ರ ಭಾರತ ಎಂಬ ಜ್ಞಾನಭೂಮಿ ತನ್ನ ಮೌಲ್ಯವನ್ನು ಕಾಪಾಡಿಕೊಳ್ಳಲು ಶಕ್ತವಾಗುತ್ತದೆ.
ಮೂಲ: ಶ್ರೀ ಸಿದ್ದೇಶ್ವರ ಸ್ವಾಮೀಜಿ
✍️ ಚೇತನ ಡಿ.ಕೆ