ಬೀಹಾರ: ಇಲ್ಲಿನ ಬರೌನಿ ಜಂಕ್ಷನ್‌ನಲ್ಲಿ ಶನಿವಾರ ಬೆಳಗ್ಗೆ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಈ ದುರಂತದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬರೌನಿ ಜಂಕ್ಷನ್‌ನಲ್ಲಿ ಬೋಗಿಯಿಂದ ಎಂಜಿನ್ ಬಿಚ್ಚುತ್ತಿದ್ದಾಗ ಎಂಜಿನ್ ಮತ್ತು ಬೋಗಿ ನಡುವೆ ಕಾರ್ಮಿಕ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ.
ಶನಿವಾರ ಬೆಳಗ್ಗೆ 9 ಗಂಟೆಗೆ ಬರೌನಿ ಜಂಕ್ಷನ್‌ನ ಪ್ಲಾಟ್‌ಫಾರ್ಮ್ ನಂ.5 ರಲ್ಲಿ ಈ ಘಟನೆ ನಡೆದಿದ್ದು, ಸಮಸ್ತಿಪುರ್ ಜಿಲ್ಲೆಯ ದಲ್ಸಿಂಗ್‌ಸರಾಯ್‌ನ ನಿವಾಸಿ ಅಮರ್ ಕುಮಾರ್ (35) ಮೃತರು ಎಂದು ಗುರುತಿಸಲಾಗಿದೆ.
ಲಕ್ನೋ- ಬರೌನಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 15204 ಪ್ಲಾಟ್‌ಫಾರ್ಮ್ ನಂ.5 ಕ್ಕೆ ಆಗಮಿಸಿದ್ದು, ಪ್ರಯಾಣಿಕರು ರೈಲಿನಿಂದ ಕೆಳಗಿಳಿದಿದ್ದರು. ಬಳಿಕ ಅಮರ್ ಕುಮಾರ್ ಎಂಜಿನ್ ಅನ್ನು ಬಿಚ್ಚಲು ಪ್ರಾರಂಭಿಸಿದ್ದಾರೆ. ಆಗ ರೈಲು ಚಾಲಕ ತಪ್ಪಾಗಿ ಎಂಜಿನ್ ಮುಂದೆ ಚಲಿಸುವಂತೆ ಮಾಡುವ ಬದಲು ಹಿಂದೆ ಚಲಿಸುವಂತೆ ಮಾಡಿದ್ದಾನೆ. ಇದರಿಂದ ರೈಲು ಮತ್ತು ಎಂಜಿನ್ ಮಧ್ಯೆ ಅಮರ್ ಸಿಕ್ಕಿಹಾಕಿಕೊಂಡಿದ್ದಾರೆ.
ಈ ಘಟನೆಯು ಪ್ರಯಾಣಿಕರು ಮತ್ತು ಮೃತರ ಕುಟುಂಬ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ರೈಲು ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಇತರ ರೈಲ್ವೇ ನೌಕರರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸೋನ್‌ಪುರದ ವಿಭಾಗೀಯ ರೈಲ್ವೇ ವ್ಯವಸ್ಥಾಪಕರು (ಡಿಆರ್‌ಎಂ) ಕೂಡ ಸ್ಥಳಕ್ಕೆ ಆಗಮಿಸಿ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.