ಬೆಳಗಾವಿ: ನಗರದಲ್ಲಿ ದಶಕಗಳಿಂದ ವಾಸವಿರುವ ಬಂಜಾರ ಸಮುದಾಯದವರು, ಸಮುದಾಯ ಭವನ ನಿರ್ಮಾಣಕ್ಕಾಗಿ ಜಾಗ ಮಂಜೂರಾತಿ ನೀಡುವಂತೆ ರಾಜ್ಯದ ಅರಣ್ಯ ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸಚಿವರ ಕಚೇರಿಯಲ್ಲಿ ಭೇಟಿಯಾದ ಬಂಜಾರ ಸಮುದಾಯದ ಮುಖಂಡರು ಹಾಗೂ ಪ್ರಮುಖರ ತಂಡ, ಈ ಕುರಿತಂತೆ ವಿವರವಾದ ಮನವಿಯನ್ನು ನೀಡಿದೆ. ಬೆಳಗಾವಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂಜಾರ ಜನತೆ ವಾಸವಿದ್ದು, ಈ ಸಮಾಜ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಮದುವೆ, ಸಾಂಸ್ಕೃತಿಕ ಹಾಗೂ ಸಮಾಜದ ಸಭೆಗಳಿಗಾಗಿ ಸ್ವಂತ ಸಮುದಾಯ ಭವನವಿಲ್ಲ ಎಂಬುದು ಈ ಮನವಿಯ ಮುಖ್ಯ ಅಂಶವಾಗಿತ್ತು.
ಸಮುದಾಯದ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ನಾಯಿಕ ಅವರ ನೇತೃತ್ವದ ಶಿಷ್ಟಮಂಡಳಿಯು, ಬೆಳಗಾವಿ ನಗರ ಅಥವಾ ಅದರ ಸುತ್ತಮುತ್ತ 1 ಎಕರೆ ಜಾಗೆಯನ್ನು ಸಮುದಾಯ ಭವನ ನಿರ್ಮಾಣಕ್ಕಾಗಿ ನೀಡುವಂತೆ ಕೋರಿದೆ. ಇಂಥ ಭವನವೊಂದು ನಿರ್ಮಾಣವಾದರೆ, ಇಡೀ ಸಮುದಾಯಕ್ಕೆ ಬಹುಮುಖ್ಯ ಕೇಂದ್ರವಾಗಬಹುದೆಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ಈ ಮನವಿಗೆ ಸ್ಪಂದಿಸಿದ ಸಚಿವ ಸತೀಶ ಜಾರಕಿಹೊಳಿ, “ಬಂಜಾರ ಸಮುದಾಯದ ಹಿತದೃಷ್ಟಿಯಿಂದ ಸರ್ಕಾರದಿಂದ ಸಾಧ್ಯವಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು” ಎಂಬ ಭರವಸೆ ನೀಡಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143