ಒಬ್ಬ ಕೆಟ್ಟ ತಂದೆ, ಕೆಟ್ಟ ಮಕ್ಕಳು ಇರಬಹುದು ಆದರೆ, ಕೆಟ್ಟ ತಾಯಿ ಈ ಜಗತ್ತಿನಲ್ಲಿ ಇರುವುದಿಲ್ಲ ಎಂಬ ಮಾತು ಈ ಆಧುನಿಕ ಸಮಾಜದಲ್ಲಿ ಆಗಾಗ ಸುಳ್ಳಾಗುತ್ತಲೇ ಬಂದಿದೆ. ತಾಯಿಯೊಬ್ಬಳು ಮಾಡಿರುವ ದುಷ್ಕೃತ್ಯ ಇಡೀ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
ಮಕ್ಕಳನ್ನು ರಕ್ಷಿಸಬೇಕಾದ ಹೆತ್ತ ತಾಯಿ, ಮಾನವೀಯತೆಯನ್ನು ಮೂಟೆಕಟ್ಟಿ ತನ್ನ 3 ವರ್ಷದ ಮಗುವನ್ನು ಕತ್ತು ಕೊಯ್ದು ಕೊಂದಿದ್ದಾಳೆ. ತನ್ನ ಪ್ರಿಯಕರನ ಜತೆ ಹೋಗಲು ಮಗು ಅಡ್ಡಿಯಾಗಿದೆ ಎಂಬ ಕಾರಣಕ್ಕೆ ಇಂಥಾ ಹೀನ ಕೃತ್ಯ ಎಸಗಿದ್ದಾಳೆ. ಬಿಹಾರದ ಮುಜಾಫರ್‌ಪುರದಲ್ಲಿ ಸೂಟ್‌ಕೇಸ್‌ನಲ್ಲಿ ಮೂರು ವರ್ಷದ ಬಾಲಕಿಯ ಶವ ಪತ್ತೆಯಾದ ನಂತರ, ಪೊಲೀಸ್ ತನಿಖೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ವಿವಾಹೇತರ ಸಂಬಂಧ ಹೊಂದಿದ್ದ ಕಾಜಲ್ ಎಂಬಾಕೆಗೆ ತನ್ನ ಪತಿಯನ್ನು ಬಿಟ್ಟು ಪ್ರಿಯಕರ ಜತೆ ಹೋಗಬೇಕು ಎಂದು ಅನಿಸಿತ್ತು. ಆದರೆ, ತನ್ನ 3 ವರ್ಷದ ಮಗಳು ಅಡ್ಡಿಯಾಗಿದ್ದಳು. ಹೀಗಾಗಿ ಕ್ರೂರತನ ಮೆರೆದ ಕಾಜಲ್, ಹೆತ್ತು-ಹೊತ್ತು ಸಾಕಿದ ಮಗಳನ್ನೇ ಕೊಂದಿದ್ದಾಳೆ. ಪ್ರಿಯಕರನ ಜೊತೆ ಇರಲು ಮಗಳನ್ನು ಕೊಂದಿರುವುದಾಗಿ ಕಾಜಲ್ ತಪ್ಪೊಪ್ಪಿಕೊಂಡಿದ್ದಾಳೆ. ಮಗುವಿನ ಕತ್ತು ಕೊಯ್ದು ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ತನ್ನ ಬಾಡಿಗೆ ಮನೆ ಸಮೀಪದ ಪೊದೆಯಲ್ಲಿ ಆಗಸ್ಟ್ 23ರಂದು ಎಸೆದಿದ್ದಳು. ಜನಪ್ರಿಯ ಟಿವಿ ಶೋ ‘ಕ್ರೈಮ್ ಪ್ಯಾಟ್ರೋಲ್’ ನೋಡಿ ಮಗಳನ್ನು ಕೊಲ್ಲಲು ಪ್ಲಾನ್ ಮಾಡಿದ್ದಾಗಿ ಕಾಜಲ್ ತಪ್ಪೊಪ್ಪಿಕೊಂಡಿದ್ದು, ಆಕೆಯ ಮಾತು ಕೇಳಿ ಒಂದು ಕ್ಷಣ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಶನಿವಾರ ಮುಜಾಫರ್‌ಪುರದ ಮಿನಾಪುರದಲ್ಲಿ ಕೆಂಪು ಟ್ರಾಲಿ ಸೂಟ್‌ಕೇಸ್‌ನಲ್ಲಿ ಮಿಸ್ತಿ ಎಂಬ ಮೂರು ವರ್ಷದ ಬಾಲಕಿಯ ಶವ ಪತ್ತೆಯಾಯಿತು. ಈ ಘಟನೆಯು ಸ್ಥಳದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತು. ಹತ್ಯೆಯ ತನಿಖೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ, ತನಿಖೆಯನ್ನ ಚುರುಕುಗೊಳಿಸಿದರು. ಬಾಲಕಿಯ ಮನೆಯವರ ಮೇಲೆ ಅನುಮಾನಗೊಂಡು ಅವರ ಮನೆಯನ್ನು ಶೋಧಿಸಿದಾಗ ನೆಲ, ಸಿಂಕ್ ಮತ್ತು ಟೆರೇಸ್ ಮೇಲೆ ರಕ್ತದ ಕುರುಹುಗಳು ಪತ್ತೆಯಾದವು. ಇದೇ ಸಂದರ್ಭದಲ್ಲಿ ಮಗು ಮಿಸ್ತಿಯ ತಾಯಿ ಕಾಜಲ್ ನಾಪತ್ತೆಯಾಗಿರುವುದನ್ನು ಪೊಲೀಸರು ಕಂಡುಕೊಂಡರು. ಘಟನೆಯ ದಿನ ಪತಿ ಮನೋಜ್‌ಗೆ ಕರೆ ಮಾಡಿ ತಾಯಿಯ ಮನೆಗೆ ಹೋಗುವುದಾಗಿ ತಿಳಿಸಿದ ಆಕೆ ಮತ್ತೆ ಮನೆಗೆ ಬರಲೇ ಇಲ್ಲ.
ಪತ್ನಿ ವಾಪಸ್ ಬರದಿರುವುದನ್ನು ಕಂಡು ಮನೋಜ್, ಪತ್ನಿ ಕಾಜಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದರು. ಪೊಲೀಸರು ಕಾಜಲ್ ಫೋನ್ ಸ್ಥಳವನ್ನು ಟ್ರ್ಯಾಕ್ ಮಾಡಿದಾಗ ಆಕೆ ತನ್ನ ಗೆಳೆಯನ ಮನೆಯಲ್ಲಿ ಇರುವುದು ಗೊತ್ತಾಯಿತು. ತನಿಖೆ ವೇಳೆ ಕಾಜಲ್ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ತಿಳಿದುಬಂದಿತು. ಬಳಿಕ ಆಕೆಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಿಯಕರನ ಜೊತೆ ಇರಲು ಮಗುವನ್ನು ದೂರ ಮಾಡಿಕೊಂಡೆ ಎಂದು ಹೇಳಿದ್ದಾಳೆ. ಮಗಳನ್ನು ಜತೆಗೆ ಕರೆದುಕೊಂಡು ಹೋಗಲು ಬಯಸಿದ್ದೆ. ಆದರೆ, ಪ್ರಿಯಕರ ಒಪ್ಪದಿದ್ದಾಗ ಚಾಕುವಿನಿಂದ ಕತ್ತು ಕೊಯ್ದು ಕೊಂದೆ ಎಂದಿದ್ದಾಳೆ.
ಆದರೆ, ಈ ಕೊಲೆಯಲ್ಲಿ ಆಕೆಯ ಪ್ರಿಯಕರನ ಕೈವಾಡವಿರುವುದು ಮತ್ತು ಆಕೆಯ ಮೇಲೆ ಆತ ಪ್ರಭಾವ ಬೀರಿದ್ದಾನೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.