ಬೆಳಗಾವಿ;- ಘನತ್ಯಾಜ್ಯ ನಿರ್ವಹಣೆಯಲ್ಲಿ ಸ್ವ-ಸಹಾಯ ಸಂಘಗಳು ಭಾಗವಹಿಸಿದಾಗಿನಿಂದ ಗ್ರಾಮಾಂತರ ಪ್ರದೇಶದಲ್ಲಿರುವ ಕಸ ನಿರ್ವಹಣಾ ಪದ್ದತಿ ಸುದಾರಿಸಿದೆ. ಸಮಾಜಕ್ಕೆ ಹಲವಾರು ನೇರ ಮತ್ತು ಪರೋಕ್ಷ ಪ್ರಯೋಜನಗಳಿಗೆ ದಾರಿ ಮಾಡಿ ಕೊಟ್ಟಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ನಿಯಮಿತ ಸಂಗ್ರಹಣಾ ಶುಲ್ಕ ಹೆಚ್ಚುತ್ತಿದೆ ಎಂದು ಬೆಂಗಳೂರಿನ ಮಹಾತ್ಮಾ ಗಾಂಧಿ ಗ್ರಾಮೀಣ ಮತ್ತು ಇಂಧನ ಅಭಿವೃಧ್ದಿ ಸಂಸ್ಥೆಯ ತರಬೇತಿ ಸಂಯೋಜಕರಾದ ಗಣೇಶ ಅಭಿಪ್ರಾಯಪಟ್ಟರು.
ಮಹಾತ್ಮಾ ಗಾಂಧಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ಮಚ್ಚೆಯ ಜಿಲ್ಲಾ ಪಂಚಾಯತ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಕುರಿತು ಪುನಶ್ಚೇತನ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ತರಬೇತಿದಾರರಾದ ಸುರೇಖಾ ಪಾಟೀಲ ಮಾತನಾಡಿ ಸ್ವ-ಸಹಾಯ ಸಂಘಗಳು ಕಸ ನಿರ್ವಹಣೆಯಲ್ಲಿ ಪಾಲ್ಗೊಳ್ಳುವುದರಿಂದ ಮಹಿಳಾ ಸಬಲೀಕರಣ ಮತ್ತು ಸುಸ್ಥಿರತೆ ಎರಡೂ ಉದ್ದೇಶಗಳನ್ನು ಪೂರೈಸಲಾಗುತ್ತಿದೆ. ಮಹಿಳೆಯರಿಗೆ ಚಾಲನಾ ಕೌಶಲ್ಯ ನೀಡುವ ಮೂಲಕ ತ್ಯಾಜ್ಯ ಸಂಗ್ರಹಿಸಲು ಬಳಸುವ ಸ್ವಚ್ಛ ವಾಹಿನಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಇನ್ನೋರ್ವ ತರಬೇತಿದಾರರಾದ ಎಂಎA.ಗಡಗಲಿ ಕಸದ ವಿಂಗಡಣೆ, ನಾಯಕತ್ವ, ಕಸ ನಿರ್ವಹಣೆ ಕುರಿತು ಸರಕಾರದ ಸುತ್ತೋಲೆಗಳ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಿದರು. ಕುಮಾರಿ. ಸುಗಂಧಾ ಆಳ್ಳಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.