ಒಬ್ಬ ವ್ಯಕ್ತಿ ಮದ್ಯಪಾನದ ಚಟಕ್ಕೆ ಬಿದ್ದಿದ್ದ. ಯಾವಾಗಲೂ ಕುಡಿದ ಮತ್ತಿನಲ್ಲೇ ಇರುತ್ತಿದ್ದ. ತನ್ನ ಕುಡಿತದ ಚಟದಿಂದ ಹೊಲ ಮನೆ, ನಗ ನಾಣ್ಯ ಎಲ್ಲವನ್ನು ಕಳೆದುಕೊಂಡ. ತನ್ನ ಎಲ್ಲಾ ಆಸ್ತಿಯನ್ನು ಕಳೆದುಕೊಂಡು, ಬರೀ ಅರ್ಧ ಎಕರೆ ಹೊಲ ಮಾತ್ರ ಉಳಿದಿತ್ತು. ಆಗ ಅವನಿಗೆ ಅನ್ನಿಸಿತು, ತಾನು ಅಪ್ಪನಿಗೆ ಒಳ್ಳೆಯ ಮಗನಾಗಲಿಲ್ಲ, ಹೆಂಡತಿಗೆ ಒಳ್ಳೆಯ ಗಂಡನಾಗಲಿಲ್ಲ, ಮಕ್ಕಳಿಗೆ ಒಳ್ಳೆಯ ಅಪ್ಪನೂ ಆಗಲಿಲ್ಲ. ಈಗ ಉಳಿದಿರುವ ಅರ್ಧ ಎಕರೆ ಹೊಲವನ್ನು ಮಾರಾಟ ಮಾಡಿ ತನ್ನ ಹೆಂಡತಿಗೆ ಬಂಗಾರದ ಒಡವೆಯನ್ನಾದರೂ ತಂದುಕೊಡಬೇಕೆಂದು ಕೊಂಡು ಯೋಚಿಸಿದ.
ಇವನಿಗೆ ಒಬ್ಬ ಸ್ನೇಹಿತನಿದ್ದ, ಆತ ಚಿನ್ನ ಬೆಳ್ಳಿಯ ವ್ಯಾಪಾರಿ. ಅವನನ್ನು ಕರೆದುಕೊಂಡು ನಗರಕ್ಕೆ ಹೋಗಿ ತನ್ನ ಹೆಂಡತಿಗೆ ಒಂದಿಷ್ಟು ಒಡವೆಯನ್ನು ಕೊಂಡುಕೊಂಡ.
ಮನೆಗೆ ಹೊರಡುವಾಗ ಸಂಜೆಯಾಗುತ್ತಾ ಬಂತು, ಇವನಿಗೆ ಸೆರೆ ಕುಡಿಯದೇ ಇರಲಾಗಲಿಲ್ಲ. ಇವನು ಕುಡಿದು, ತೂರಾಡುತ್ತಾ, ಬರುವ ಸಮಯಕ್ಕೆ ಊರಿಗೆ ಹೋಗುವ ಬಸ್ಸು ಹೊರಟು ಹೋಗಿತ್ತು.
ಆಗ ಅವನ ಸ್ನೇಹಿತ, ಇಬ್ಬರ ಬಳಿಯೂ ಸಾಕಷ್ಟು ಬಂಗಾರದ ನಗ ನಾಣ್ಯಗಳಿವೆ, ಈ ಕತ್ತಲೆಯಲ್ಲಿ ಊರಿಗೆ ಹೋಗುವುದು ಬೇಡಾ, ಇಲ್ಲೇ ಎಲ್ಲಾದರೂ ಉಳಿದುಕೊಂಡು, ಬೆಳಗ್ಗೆ ಎದ್ದು ಹೊರಡೋಣ ಎಂದು ಹೇಳಿದ.
ಇವನ ಮಾತಿಗೆ ಆ ಕುಡುಕ ವ್ಯಕ್ತಿ ಒಪ್ಪಲಿಲ್ಲ. ಹೇಗೂ ಬೆಳದಿಂಗಳು ಚೆನ್ನಾಗಿದೆ, ನಿಧಾನವಾಗಿ ನಡೆದುಕೊಂಡೇ ಹೋಗೋಣ ಎಂದ.
ಸ್ವಲ್ಪ ದೂರ ನೆಡೆದು ಹೋಗುತ್ತಿದ್ದಂತೆ, ಈ ಕುಡುಕ ತೂಕಡಿಸತೊಡಗಿದ. ಅವನಿಗೆ ನಿದ್ದೆ ತಡೆಯಲಾಗಲಿಲ್ಲ. ಬಹಳ ನಿದ್ದೆ ಬರುತ್ತಿದೆ,ಇಲ್ಲೇ ಸ್ವಲ್ಪ ಸಮಯ ಮಲಗಿ ಹೋಗೋಣ ಎಂದು ಒಂದು ಮರದ ಬುಡದಲ್ಲಿ ಮಲಗಿಯೇ ಬಿಟ್ಟ.
ಇವನ ಸ್ನೇಹಿತನಿಗೆ ಹೆದರಿಕೆಯಾಗಿ ಅವನು ಮರಹತ್ತಿ ಕುಳಿತುಬಿಟ್ಟ. ಸ್ವಲ್ಪ ಹೊತ್ತಿನಲ್ಲಿ ನಾಲ್ಕು ಜನ ಕಳ್ಳರು ಇದೇ ದಾರಿಯಲ್ಲಿ ಬಂದು, ಈ ಕುಡುಕನನ್ನು ಎಬ್ಬಿಸಿ, ನಿನ್ನ ಬಳಿ ಏನೇನಿದೆ ಅದೆಲ್ಲವನ್ನೂ ಕೊಡು ಎಂದು ಗದರಿಸಿದರು. ಈತ ತನ್ನ ಜೇಬಿನಲ್ಲಿದ್ದ ಸ್ವಲ್ಪ ಹಣವನ್ನೂ ಹೆಂಡತಿಗೆಂದು ತೆಗೆದುಕೊಂಡ ಬಂಗಾರದ ಒಡವೆಗಳನ್ನು ತೆಗೆದು ಕೊಟ್ಟು ಬಿಟ್ಟ.
ಕಳ್ಳರಿಗೆ ಕುಡುಕನ ಮೇಲೆ ಅನುಮಾನ ಬಂದು, ಇದು ಅಸಲಿ ಬಂಗಾರ ಹೌದೊ ಅಲ್ಲವೊ ಎಂದು ಅವನನ್ನು ಕೇಳಿದರು. ಆಗ ಅವನು, ಇದು ನಿಜವಾದ ಬಂಗಾರವೇ,! ಬೇಕಿದ್ದರೆ, ಮರದ ಮೇಲಿರುವ ನನ್ನ ಸ್ನೇಹಿತನನ್ನೇ ಕೇಳಿ, ನಾನು ಅವನು ಇಬ್ಬರೂ ಕೂಡಿಯೇ ಈ ದಿನ ಅದನ್ನು ಖರೀದಿಸಿದ್ದು ಎಂದ. ಕಳ್ಳರು, ಮರ ಹತ್ತಿ ಕುಳಿತಿದ್ದ ಅವನ ಸ್ನೇಹಿತನನ್ನೂ ಕೆಳಗಿಳಿಸಿ ಅವನ ಬಳಿ ಇದ್ದ ಬಂಗಾರ ಹಣವನ್ನು ದೋಚಿಕೊಂಡು ಹೋದರು.
ಕುಡುಕನ ಸ್ನೇಹಿತ, ಇವನನ್ನು ನೋಡಿ ಕೋಪದಿಂದ, ನಿನ್ನಂತವನ ಸ್ನೇಹ ಮಾಡಿದಕ್ಕೆ ನನಗೆ ತಕ್ಕ ಶಾಸ್ತಿಯಾಯಿತು, ಎಂದುಕೊಂಡು, ಅವನನ್ನು ತಿರಸ್ಕಾರದಿಂದ ನೋಡುತ್ತಾ,ಅವನನ್ನು ಅಲ್ಲೇ ಬಿಟ್ಟು ಮುಂದೆ ನಡೆದುಹೋದ.
ನಾವು ಯಾರ ಜೊತೆ ಸ್ನೇಹ ಮಾಡುತ್ತೇವೊ, ನಮ್ಮ ಜೀವನವೂ ಹಾಗೆ ಆಗುತ್ತದೆ. ಒಳ್ಳೆಯವರ ಜೊತೆ ಸ್ನೇಹ ಮಾಡಿದರೆ, ನಮಗೂ ಒಳ್ಳೆಯದಾಗುತ್ತದೆ, ಕೆಟ್ಟವರ ಸಂಗ ಮಾಡಿದರೆ, ಅದರಿಂದ ನಮಗೂ ಕೆಡಕೇ ಆಗುವುದು.
✍️ ಸುವರ್ಣಾ ಮೂರ್ತಿ.
ಸಂಗ್ರಹ:- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ ತಾ. ಜೇವರ್ಗ