“ತಂದೆಗೆ ಮಗಳಾಗಿ, ಗಂಡನಿಗೆ ಬೆಳವಣಿಗೆಯಾಗಿ, ಸಹೋದರನಿಗೆ ಆಸರೆಯಾಗಿ, ಮಗುವಿಗೆ ತಾಯಿಯಾಗಿ, ಸಾಧನೆಯಲ್ಲಿ ಸ್ಪೂರ್ತಿಯಾಗಿ, ಪ್ರೇಮಿಗೆ ಪ್ರೀತಿಯಾಗಿ, ಮನೆಗೆ ಬೆಳಗುವ ಬೆಳಕಾಗಿ ಇರುವ ಜಗತ್ತಿನ ಎಲ್ಲಾ ಸುಂದರ ಮನೋಭಾವದ ಮಹಿಳೆಯರಿಗೆ – ಮಹಿಳಾ ದಿನದ ಶುಭಾಶಯಗಳು”.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ:
20ನೇ ಶತಮಾನದ ಆರಂಭದಲ್ಲಿ ಮಹಿಳೆಯರು ತಮ್ಮ ಕಾರ್ಮಿಕರ ಹಕ್ಕುಗಳಿಗಾಗಿ , ಮತದಾನದ ಹಕ್ಕುಗಳಿಗಾಗಿ ಮತ್ತು ಲಿಂಗ ಸಮಾನತೆಗಾಗಿ ಬೀದಿಗಿಳಿದು ಪ್ರತಿಭಟಿಸಿದರು. ಪ್ರತಿಭಟನೆಯ ಸ್ವರೂಪ ತೀವ್ರತೆಯನ್ನು ಪಡೆಯುತ್ತಾ 1908ರಲ್ಲಿ ಅಮೆರಿಕಾದ ನ್ಯೂಯಾರ್ಕ್ ನಲ್ಲಿ15 ಸಾವಿರ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಮೆರವಣಿಗೆ ನಡೆಸಿದರು.ಇದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಾಂದಿಯಾಯಿತು.
1010 ರಲ್ಲಿ ಅಂತರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ಕ್ಲಾರಾ ಜೆಟ್ಕಿನ್ ಎಂಬ ಮಹಿಳೆ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲು ಪ್ರಸ್ತಾಪವಿಟ್ಟಳು. 1975ರಲ್ಲಿ ವಿಶ್ವ ಸಂಸ್ಥೆಯು ಮಾರ್ಚ್ 8ನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಿತು.
ಅಂದಿನಿಂದ ಪ್ರತಿ ವರ್ಷ ಮಾರ್ಚ್ 8 ನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಈ ದಿನದಂದು ವೈಯಕ್ತಿಕ,ಸಾಮಾಜಿಕ ಮತ್ತು ವೃತ್ತಿಪರ ಗುರಿಗಳನ್ನು ಸಾಧಿಸಲು ಶಾಂತಿ, ನ್ಯಾಯ, ಸಮಾನತೆ ಮತ್ತು ಪ್ರಗತಿಗಾಗಿ ಹೋರಾಟ ನಡೆಸಿದ ಮಹಿಳೆಯರ ಸಾಧನೆಗಳನ್ನು
ಸ್ಮರಿಸುವುದು ಮತ್ತು ಗೌರವಿಸುವುದು.
* ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು.
* ಮಹಿಳಾ ಸಬಲೀಕರಣವನ್ನು ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ.
ಇಂದು ಹಳ್ಳಿಯಿಂದ ಹಿಡಿದು ದೇಶ ವಿದೇಶಗಳವರೆಗೂ ಮಹಿಳೆಯರು ಹೆಜ್ಜೆ ಇಟ್ಟಿದ್ದಾರೆ. ಅವರ ಸಾಧನೆ ಮತ್ತು ಕೊಡುಗೆಗಳು ಊಹೆಗೂ ನಿಲುಕದ್ದು . ಅನ್ಯಗ್ರಹದಲ್ಲಿ ವಾಸಿಸಲು ಯೋಗ್ಯ ಸ್ಥಳವನ್ನು ಹುಡುಕುತ್ತಿರುವ ಪ್ರಯತ್ನಗಳ ಸಂದರ್ಭದಲ್ಲಿ ಇಂದು ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ, ಶಿಕ್ಷಣ,ಸಂಘಟನೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಆದರೂ ಕೂಡ ಇನ್ನೂ ಅನೇಕ ಕುಟುಂಬಗಳಲ್ಲಿ ಮಹಿಳೆಯರನ್ನು ಸಮಾನವಾಗಿ ಪರಿಗಣಿಸದೆ ಹೆಣ್ಣಿನ ಪಾತ್ರ ಮನೆಕೆಲಸಕ್ಕೆ ಮಾತ್ರ ಸೀಮಿತ ಎಂಬ ಮನಸ್ಥಿತಿಯಲ್ಲೇ ಇದ್ದಾರೆ. ಮಹಿಳೆಯರು ಪುರುಷರಂತೆ ಎಲ್ಲದರಲ್ಲೂ ಸಮಾನ ಸ್ವಾತಂತ್ರ್ಯ ಮತ್ತು ಅವಕಾಶಗಳಿಗೆ ಅರ್ಹರಾಗಿರುವುದರಿಂದ ಅಂತಹ ಮನಸ್ಥಿತಿ ಬದಲಾಗಬೇಕಾಗಿದೆ.
ಒಂದು ಕುಟುಂಬದ ತೇರು ಸಾಂಗವಾಗಿ ಸಾಗಬೇಕಾದರೆ ಗಂಡು-ಹೆಣ್ಣುಗಳೆಂಬ ಎರಡು ಗಾಲಿಗಳು ಮುಖ್ಯ ಎಂಬುದನ್ನು ಎಲ್ಲ ಕುಟುಂಬಗಳು ಅರಿಯಬೇಕಾಗಿದೆ ಲಿಂಗ ಸಮಾನತೆ ಎಂಬುದು ಮಹಿಳೆಯರ ಸಮಸ್ಯೆ ಅಲ್ಲ, ಅದು ಆರ್ಥಿಕ ಸಮಸ್ಯೆ ಕೂಡಾ ಆಗಿದೆ.
ಮಹಿಳೆಯರು ಸಶಕ್ತ ಗೊಳ್ಳಬೇಕು ಎಂಬುದು “ಪುರುಷರ ಪತನಕ್ಕಾಗಿ ಅಲ್ಲ. ಅದು ಒಂದು ಕುಟುಂಬದ ಏಳಿಗೆಗಾಗಿ.. ಆದರ ಮೂಲಕ ಒಂದು ಸಮಾಜದ…ದೇಶದ ಏಳಿಗೆಗಾಗಿ” ಎಂಬುದನ್ನು ತಿಳಿಯಬೇಕಾಗಿದೆ.
‘ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ಪಾರ್ವತಿ, ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು, ಎಂದು ನಮ್ಮ ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಅದನ್ನು ಅರಿತು ಎಲ್ಲರೊಂದಿಗೂ ಸಭ್ಯತೆಯಿಂದ ವರ್ತಿಸುವ, ಸಹಕಾರ ಮನೋಭಾವನೆ ಇಟ್ಟುಕೊಳ್ಳುವ ಅಗತ್ಯ ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಿದೆ.
ಮಹಿಳೆಯರು ತಮ್ಮಲ್ಲಿರುವ ಕೌಶಲ್ಯ ಜ್ಞಾನ ಗಳನ್ನು ಅರಿತು ಅವುಗಳನ್ನು ಬೆಳೆಸಿ ಕೊಳ್ಳುವ ಅವಕಾಶಗಳನ್ನು ಹುಡುಕಬೇಕು. ಮಹಿಳೆಯರು ಸಬಲೀಕರಣ ಕೊಳ್ಳುವುದರೊಂದಿಗೆ ತಮ್ಮ ಸಂಸ್ಕೃತಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಲಿಂಗ ಸಮಾನತೆಯಿಂದ ಮಾತ್ರ ದೇಶದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಲು ಸಾಧ್ಯ.
-ಅನಸೂಯ ಹಿರೇಮಠ