ಬೆಳಗಾವಿ: ನಗರದ ಖಾಸಬಾಗ ಪ್ರದೇಶದಲ್ಲಿ ಮನಕಲಕುವ ಘಟನೆ ನಡೆದಿದ್ದು, ಒಂದೇ ಕುಟುಂಬದ ಮೂವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೊಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಖಾಸಬಾಗದ ಜೋಶಿ ಮಾಳದಲ್ಲಿ ವಾಸವಿದ್ದ ಮಂಗಳಾ ಕುರಡೇಕರ್ (70) ಅವರು ತಮ್ಮ ಪುತ್ರ ಸಂತೋಷ ಕುರಡೇಕರ್ (44), ಪುತ್ರಿ ಸುವರ್ಣ ಕುರಡೇಕರ್ (42), ಮತ್ತು ಮತ್ತೊಬ್ಬ ಪುತ್ರಿ ಸುನಂದಾ ಕುರಡೇಕರ್ (20) ಅವರೊಂದಿಗೆ ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ವಿಷ ಸೇವಿಸಿದರು. ಈ ಘಟನೆಯಲ್ಲಿ ಮಂಗಳಾ, ಸಂತೋಷ ಮತ್ತು ಸುವರ್ಣ ಮೃತಪಟ್ಟಿದ್ದು, ಸುನಂದಾ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡೆತ್ ನೋಟ ಹೊರಹಾಕಿದ ಆರ್ಥಿಕ ಒತ್ತಡದ ವಾಸ್ತವತೆ:
ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಸಂತೋಷ ಕುರಡೇಕರ್ ಅವರು ಮರಾಠಿ ಭಾಷೆಯಲ್ಲಿ ಬರೆದಿರುವ ಡೆತ್ ನೋಟಿನಲ್ಲಿ, ಅವರು ‘ಗೋಲ್ಡ್ ಚೀಟಿ’ (ಚೀಟ್‌ಫಂಡ್ ಮಾದರಿಯ) ಹಣಕಾಸು ವ್ಯವಹಾರಗಳಲ್ಲಿ ತೊಡಗಿದ್ದನ್ನು ಉಲ್ಲೇಖಿಸಿದ್ದಾರೆ. ಹಲವಾರು ಜನರಿಂದ ಹಣ ಪಡೆದುಕೊಂಡು, ಅವರಿಗೆ ಹಿಂದಿರುಗಿಸಲು ಸಾಧ್ಯವಾಗದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾರೆ.
ವಡಗಾವಿಯ ಚಿನ್ನದ ವ್ಯಾಪಾರಿ ರಾಜು ಕುಡತಲಕ ಅವರಿಗೆ 500 ಗ್ರಾಂ ಚಿನ್ನ ನೀಡಿ ಇಟ್ಟಿದ್ದೇನೆ; ಆದರೆ ಅದನ್ನು ಮರಳಿ ಕೇಳಿದಾಗ ಅವರು ಮತ್ತು ಅವರ ಪತ್ನಿ ಸೇರಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತೋಷ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಸುಳ್ಳು ಸುದ್ದಿ ಹರಡಿಸಿಕೊಂಡು ತಮ್ಮ ಮಾನ ನಷ್ಟ ಮಾಡಿದ್ದಾರೆ ಎಂದು ಅವರು ಡೆತ್ ನೋಟಿನಲ್ಲಿ ಬರೆದುಕೊಂಡಿದ್ದಾರೆ.
ಸ್ಥಳೀಯರು ಮತ್ತು ಸ್ನೇಹಿತರ ಶೋಕಭಾವನೆ:
ಮೃತ ಸಂತೋಷ ಅವರ ಸ್ನೇಹಿತ ಮಹೇಶ್ ವರ್ಣೇಕರ್ ಅವರು, “ಸಂತೋಷ ಬಹಳ ಶಾಂತ ಸ್ವಭಾವದವನಾಗಿದ್ದು, ಚಿನ್ನದ ವ್ಯವಹಾರದ ಹೊರೆ ಜಾಸ್ತಿಯಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು,” ಎಂದು ಹೇಳಿದರು.
ಇದೇ ರೀತಿಯಲ್ಲಿ ಸ್ಥಳೀಯ ನಿವಾಸಿ ಅಂಜನಾ ರಾಯ್ಕ ಅವರು, “ಈ ಕುಟುಂಬ ಕಳೆದ 15 ವರ್ಷಗಳಿಂದ ಜೋಶಿ ಮಾಳದಲ್ಲಿ ವಾಸವಿದ್ದು, ಸಮಾಜಮುಖಿಯಾಗಿ ನಡೆದುಕೊಂಡವರು. ಹರಿ ಮಂದಿರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎಲ್ಲರೊಂದಿಗೆ ನಗುನಗುತ್ತಾ ಮಾತನಾಡುತ್ತಿದ್ದವರು,” ಎಂದು ಹೇಳಿದರು.
ಪೊಲೀಸರಿಂದ ತನಿಖೆ ಆರಂಭ:
ಘಟನಾ ಸ್ಥಳಕ್ಕೆ ಶಹಾಪುರ ಠಾಣೆಯ ಪೊಲೀಸರು ಹಾಗೂ ಪೊಲೀಸ್ ಆಯುಕ್ತ ಭೂಷಣ ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ ನೋಟಿನ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ. ಆರೋಪಿತ ರಾಜು ಕುಡತಲಕ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಬೆಳಗಾವಿ ನಿವಾಸಿಗಳ ಮನಸ್ಸು ಕುಗ್ಗಿಸಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಸಮಾಜದ ಒತ್ತಡಕ್ಕೆ ಒಳಗಾಗುವ ಕುಟುಂಬಗಳಿಗೆ ಇದು ಎಚ್ಚರಿಕೆಯ ಸಂದೇಶವಾಗಿರಬೇಕು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143