ಬೆಳಗಾವಿ ಜುಲೈ 26, 2025: “ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ಆಕರ್ಷಿತರಾಗಿ ಯಂತ್ರಮಾನವರಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು ಕಲಿಕಾ ಪ್ರಕ್ರಿಯೆಯಿಂದ ಹಿಮ್ಮೆಟ್ಟುತ್ತಿದ್ದಾರೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ ವ್ಯಕ್ತಪಡಿಸಿದರು.
ಅವರು ಶನಿವಾರ ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಜಿಲ್ಲಾ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮವು ಮಕ್ಕಳ ಪಾಠ್ಯೇತರ ಚಟುವಟಿಕೆಗಳಿಗೂ ಸಾಹಿತ್ಯಾಸಕ್ತಿಗೂ ವೇದಿಕೆಯಾಗಿತ್ತು.
ಹಿರಿಯ ಸರ್ವಾಧ್ಯಕ್ಷ ಎಸ್.ಎಂ. ಶಿರೂರ ಅವರು ಮಾತನಾಡಿ, “ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯಾಗಿ ರೂಪಿಸಬೇಕು” ಎಂದು ಪಾಲಕರಿಗೆ ಉನ್ನತ ಸಂದೇಶ ನೀಡಿದರು.
ಕಿರಿಯ ಸರ್ವಾಧ್ಯಕ್ಷೆ ಲಾವಣ್ಯ ಎಂ. ಅಂಗಡಿ, ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ “ಗುಡಿ, ಚರ್ಚ್, ಮಸೀದಿಗಳಿಗಿಂತ ಶಾಲೆಯೇ ಶ್ರೇಷ್ಠವಾಗಿದ್ದು, ಶಾಲೆಗಳಿಂದ ಭವಿಷ್ಯದ ಭಾರತ ನಿರ್ಮಾಣ ಸಾಧ್ಯ” ಎಂಬ ಸಂದೇಶವನ್ನು ಸಾರಿದರು. ಅವರು ಬುದ್ಧನ ಶಾಂತಿ, ಬಸವಣ್ಣನ ಭಕ್ತಿ, ಅಂಬೇಡ್ಕರ ಛಲ ಇತ್ಯಾದಿಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕುಮಾರಿ ಲಕ್ಷ್ಮಿ ಪಾಟೀಲ ಅವರ ಪುಸ್ತಕ ಬಿಡುಗಡೆ ಮಾಡಲಾಯಿತು. ಜೊತೆಗೆ ಹಿರಿಯ ಪತ್ರಕರ್ತ ಮತ್ತು ಲೇಖಕ ಸಿ.ವೈ. ಮೆಣಸಿನಕಾಯಿ ಅವರ “ಸುದ್ದಿ ಸದ್ದು” ಪತ್ರಿಕೆಯೂ ಲೋಕಾರ್ಪಣೆಗೊಂಡಿತು.
ಈ ಸಂದರ್ಭ ಹುಕ್ಕೇರಿ ತಾಲೂಕಾ ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಎ.ಎಮ್. ಕರ್ಣಾಚಿ, ಎ.ವೈ. ಸೋನ್ಯಾಗೋಳ, ನಿರಂಜನ ಶಿರೂರ ಮತ್ತು ರಮೇಶ ಬಾಗೇವಾಡಿ ಇವರನ್ನು ಜಿಲ್ಲಾ ಸಮಿತಿ ಹಾಗೂ ಕೇಂದ್ರ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಚ.ನಂ. ಅಶೋಕ, ಜಿಲ್ಲಾಧ್ಯಕ್ಷ ಸಿದ್ರಾಮ ನಿಲಜಗಿ, ಸಂಘಟನಾ ಕಾರ್ಯದರ್ಶಿ ಎಮ್.ವೈ. ಮೆಣಸಿನಕಾಯಿ, ಹಿರಿಯ ಸಾಹಿತಿಗಳು ಬಸವರಾಜ ಗಾರ್ಗಿ, ಮಹಾವೀರ ಕೆಳಗಡೆ, ಬಿ.ಎಲ್. ಪೂಜಾರಿ, ಹನುಮಂತ ನಾಗಪ್ಪಗೋಳ ಹಾಗೂ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು, ಕವಿಗೋಷ್ಠಿ, ಚಿಂತನಗೋಷ್ಠಿ ಸೇರಿದಂತೆ ನಾನಾ ಕಾರ್ಯಕ್ರಮಗಳು ನಡೆಯುತ್ತಾ ಪ್ರೇಕ್ಷಕರಿಂದ ಹರ್ಷದ ಪ್ರತಿಕ್ರಿಯೆ ಗಳಿಸಿದವು.
ಪ್ರಕಾಶ ಹೊಸಮನಿ ಅವರು ಕಾರ್ಯಕ್ರಮಕ್ಕೆ ಸ್ವಾಗತ ತಿಳಿಸಿದರು.
ಕೆ.ವೈ. ಹೈಬತ್ತಿ ನಿರೂಪಣೆ ನಡೆಸಿದರು.
ಸುರೇಶ ಸಕ್ರೆನ್ನವರ ವಂದನಾ ಭಾಷಣ ನಿರ್ವಹಿಸಿದರು.
ವರದಿ: ಎ.ವೈ. ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ
9164577143