ಹಾವೇರಿ: ಜಿಲ್ಲೆಯ ಶ್ರೀ ಹೊಸಮಠದ ಸಮುದಾಯ ಭವನದಲ್ಲಿ ಎರಡು ದಿನಗಳ ‘ಸೊಪ್ಪಿನ ಮೇಳ’ ಜರುಗಿತು.
ಸೊಪ್ಪಿನ ಕುರಿತ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು. ತೋಟ-ಗದ್ದೆಯಲ್ಲಿ ಹಾಗೂ ನೈಸರ್ಗಿಕವಾಗಿ ಬೆಳೆಯುವ ಸೊಪ್ಪುಗಳ ಮಹತ್ವ ಕುರಿತು ಉಪನ್ಯಾಸ, ಮಕ್ಕಳಿಗೆ ಚಿತ್ರಕಲಾ ಮತ್ತು ಸೊಪ್ಪಿನ ಅಡುಗೆಗಳ ಸ್ಪರ್ಧೆ ನಡೆದವು.
ತುಮಕೂರಿನ ಮುರಳೀಧರ ಗುಂಗುರಮಳೆ ಅವರು ನಡೆಸಿಕೊಟ್ಟ ‘ಅಜ್ಜಿಯ ಮಡಿಲು- ಸೊಪ್ಪಿನ ಕಡಲು’ ಎಂಬ ವಿಶೇಷ ಕಾರ್ಯಕ್ರಮದಲ್ಲಿ, ತರಹೇವಾರಿ ಸೊಪ್ಪುಗಳ ಅರಿವು ಮೂಡಿಸಿದರು. ಕಾಡು ಹಾಗೂ ಹೊಲ, ತೋಟ, ಗದ್ದೆಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಹತ್ತು ಹಲವು ಸಸಿಗಳ ವಿವರ ಹಾಗೂ ಅವುಗಳ ಅಡುಗೆ ವಿಧಾನವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಎರಡು ವಿಭಾಗಗಳಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಒಟ್ಟು 46 ಮಕ್ಕಳು ಪಾಲ್ಗೊಂಡು, ಸೊಪ್ಪಿನ ಲೋಕವನ್ನು ಬಣ್ಣ ಹಾಗೂ ರೇಖೆಗಳಲ್ಲಿ ಅನಾವರಣಗೊಳಿಸಿದರು.
ಅಡುಗೆ ಸ್ಪರ್ಧೆ:
ಸೊಪ್ಪುಗಳನ್ನು ಬಳಸಿ ಮಾಡಲಾದ ಅಡುಗೆಗಳ ಸ್ಪರ್ಧೆಯಲ್ಲಿ ಸುನಿತಾ ಕವಳಿಕಾಯಿ (ಪ್ರಥಮ), ಮಂಜುಳಾ ಕುಲ್ಮಿ (ದ್ವಿತೀಯ) ಹಾಗೂ ಲಲಿತಾ ಶಿವಶೆಟ್ಟರ್ (ತೃತೀಯ) ಬಹುಮಾನಕ್ಕೆ ಪಾತ್ರರಾದರು.
ಸೊಪ್ಪಿನ ವೈವಿಧ್ಯಮಯ ಅಡುಗೆ ಹಾಗೂ ಕುರುಕಲು ತಿನಿಸುಗಳನ್ನು ಸ್ಪರ್ಧೆಗೆ ತರಲಾಗಿತ್ತು.
ಶ್ರೀ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಅವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಪೋಷಕಾಂಶದಿಂದ ತುಂಬಿಕೊಂಡ ಸೊಪ್ಪುಗಳನ್ನು ಹೆಚ್ಚೆಚ್ಚು ಬಳಸುವ ಮೂಲಕ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ, ಶ್ರೀ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ಮೇಳದ ಸಂಚಾಲಕ ಸಿ. ಶಾಂತಕುಮಾರ, ಮಾಲತೇಶ, ಚಿಣ್ಣರು, ಹಿರಿಯರು, ಗಣ್ಯಮಾನ್ಯರು, ಊರಿನ ಜನತೆ ಉಪಸ್ಥಿತರಿದ್ದರು.