Live Stream

[ytplayer id=’22727′]

| Latest Version 8.0.1 |

National NewsState News

UPSC: ಬೆಳಗಾವಿ ಹುಡುಗನ ಯುಪಿಎಸ್ಸಿ ಸಾಧನೆ: ಬಡತನ ಮೀರಿ ಬೆಳೆದ ಹನುಮಂತಪ್ಪ ನಂದಿ

UPSC: ಬೆಳಗಾವಿ ಹುಡುಗನ ಯುಪಿಎಸ್ಸಿ ಸಾಧನೆ: ಬಡತನ ಮೀರಿ ಬೆಳೆದ ಹನುಮಂತಪ್ಪ ನಂದಿ

ಬೆಳಗಾವಿ: ಜಿಲ್ಲೆಯ ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ ನಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ‌ ಮೆರೆದಿದ್ದಾರೆ. ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ ತನ್ನತ್ತ‌ ತಿರುಗಿ ನೋಡಬೇಕೆಂಬ ಅಧಮ್ಯ ಆತ್ಮ ವಿಶ್ವಾಸ. ತಂದೆ-ತಾಯಿಗೆ ಮಗನ ಮೇಲೆ ಇದ್ದ ನಿರೀಕ್ಷೆ, ಹುಸಿ ಆಗಲಿಲ್ಲ. ಸತತ ಓದು, ಪರಿಶ್ರಮ ಆತನ ಕೈ ಹಿಡಿದಿದ್ದು, ಯುಪಿಎಸ್ಸಿ ಪರೀಕ್ಷೆಯಲ್ಲಿ 910ನೇ ರ‍್ಯಾಂಕ್ ಪಡೆಯುವ ಮೂಲಕ ಹನುಮಂತಪ್ಪ ಸಾಧನೆಗೈದಿದ್ದಾನೆ.

ಹನುಮಂತಪ್ಪ ನಂದಿ ಯುಪಿಎಸ್ಸಿಯಲ್ಲಿ ಪಾಸ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕೊಡ್ಲಿವಾಡದ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಪ್ಪ ಯಲ್ಲಪ್ಪ, ಅವ್ವ ಕಾಳವ್ವ, ಪತ್ನಿ ಯಶೋಧಾ, ಸಹೋದರ ಆನಂದ ಸೇರಿ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲ. ಜೊತೆಗೆ ಇಡೀ ಊರಿಗೆ ಊರೇ ಹನುಮಂತನ ಸಾಧನೆಗೆ ಹೆಮ್ಮೆ ಪಡುತ್ತಿದೆ.

ಹನುಮಂತ ಅವರು, 1 ರಿಂದ 7ನೇ ತರಗತಿಯವರೆಗೆ ಸ್ವಗ್ರಾಮ ಕೊಡ್ಲಿವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದು, 8-10ನೇ ತರಗತಿ ಸತ್ತಿಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ್ದಾರೆ. ಪಿಯುಸಿ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರೆ, ಬೆಳಗಾವಿ ಗೋಗಟೆ‌ ಕಾಲೇಜಿನಲ್ಲಿ ಬಿ.ಇ ಮೆಕ್ಯಾನಿಕಲ್ ಪದವಿ ಪಡೆದಿದ್ದಾರೆ.

ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಶಿಷ್ಯವೇತನದಡಿ ದೆಹಲಿಯಲ್ಲಿ 1 ವರ್ಷ ತರಬೇತಿ ಪಡೆದಿದ್ದರು. ದೆಹಲಿಯ ಶಂಕರ ಐಎಎಸ್ ಇನ್ಸಿಟಿಟ್ಯೂಟ್, ಇನ್ ಸೈಟ್ಸ್ ಐಎಎಸ್, ಅಕ್ಕಾ ಐಎಎಸ್ ಸೆಂಟರ್ ಗಳಲ್ಲಿ ಓದಿ, ಸದ್ಯ ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡು ಯುಪಿಎಸ್ಸಿ ಪರೀಕ್ಷೆಗೆ ಓದುತ್ತಿದ್ದರು.

ತಾವು ಯುಪಿಎಸ್ಸಿ ಪಾಸಾದ ಹನುಮಂತಪ್ಪ ನಂದಿ, 8ನೇ ಪ್ರಯತ್ನದಲ್ಲಿ ಪಾಸ್ ಆಗಿದ್ದೇನೆ. ಬಹಳ ಖುಷಿಯಾಗುತ್ತಿದೆ. ಮೂರು ಬಾರಿ ಯುಪಿಎಸ್ಸಿ ಮುಖ್ಯ ಪರೀಕ್ಷೆ ಬರೆದಿದ್ದೆ. ಕೆಪಿಎಸ್ಸಿ ಮುಖ್ಯ ಪರೀಕ್ಷೆಗೂ ಓದುತ್ತಿದ್ದೆ. ನನ್ನ ಈ ಸಾಧನೆ ತಂದೆ-ತಾಯಿಗೆ ಅರ್ಪಿಸುತ್ತೇನೆ. ಸ್ನೇಹಿತರು ಸಾಕಷ್ಟು ಸಹಾಯ ಮಾಡಿದ್ದು, ಅವರನ್ನು ಎಂದೂ ಮರೆಯಲ್ಲ. ಅದೇ ರೀತಿ ಚಿಕ್ಕಂದಿನಲ್ಲಿ ಚಿಕ್ಕಂದಿನಲ್ಲಿ ಸತ್ತಿಗೇರಿ ಹಾಸ್ಟೇಲ್ ವಾರ್ಡನ್ ಎಸ್.ಕೆ.ಪಾಟೀಲ ಅವರೇ ನನಗೆ ಯುಪಿಎಸ್ಸಿ ಪರೀಕ್ಷೆ ಬಗ್ಗೆ ಮಾರ್ಗದರ್ಶನ ನೀಡಿದ್ದರು. ನನಗೆ ಸಹಾಯ ಮಾಡಿದ ಎಲ್ಲರಿಗೂ‌ ನಾನು ಎಂದಿಗೂ ಚಿರಋಣಿ ಹಾಗೂ ಸಮಾಜದಲ್ಲಿ ಬಡವರು, ನೊಂದವರಿಗೆ ಒಳ್ಳೆಯ ಸೇವೆ ಸಲ್ಲಿಸುವ ಅಭಿಲಾಷೆ ಇದೆ. ಭಾರತೀಯ ರೈಲ್ವೇ ಸೇವೆ ಅಥವಾ ಭಾರತೀಯ ಕಂದಾಯ ಸೇವೆಯಲ್ಲಿ ಉನ್ನತ ಹುದ್ದೆ ಸಿಗುವ ನಿರೀಕ್ಷೆ ಇದೆ. ಯಾವುದೇ ಹುದ್ದೆ ಸಿಕ್ಕರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮಾಧ್ಯಮದವರೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";