ನಮಸ್ಕಾರ ಓದುಗರೇ, ನಾನು ನಿಮ್ಮ ನಮ್ಮೂರ ಬಾನುಲಿಯ ರೇಡಿಯೋ ನಿರೂಪಕ (ರೇಡಿಯೋ ಜಾಕಿ) ಕುಚಿಕು ಚೇತನ. ಇಷ್ಟು ದಿನ ನನ್ನ ಧ್ವನಿ ಕೇಳಿದ್ದೀರಿ. ಇದೀಗ ನನ್ನ ಬರಹವನ್ನು ಓದುವ ಅವಕಾಶ ನಿಮಗೆ ಸಿಕ್ಕಿದೆ. ಪರ – ವಿರೋಧ ಎರಡಕ್ಕೂ ನಾನು ಸ್ವಾಗತ ಕೋರುತ್ತೇನೆ.
ಇಂದು ನಾನು ಹೇಳ ಹೊರಟಿರುವ ವಿಷಯ…. ಅಂದ ಹಾಗೆ ವಿಷಯಕ್ಕೆ ಬರುವ ಮೊದಲು, ನೀವು ನನ್ನ ಪ್ರಶ್ನೆಗೆ ಉತ್ತರಿಸಬೇಕು. ಅದುವೇ ಈ ಅಂಕಣದ ಹೆಸರೂ ಕೂಡ ಹೌದು. ಅದುವೇ, ನಿಮ್ಮ ಹುಟ್ಟು ಆಗಿದ್ದು ಯಾವಾಗ? ಯೋಚಿಸಿ ಹೇಳಿ. ಕೆಲವು ಆಧ್ಯಾತ್ಮಿಕ ಹಾಗೂ ತತ್ವ ಶಾಸ್ತ್ರದ ಅಭಿರುಚಿ ಉಳ್ಳವರಿಗೆ, ನಾನು ಏನನ್ನು ಹೇಳಲು ಹೊರಟಿದ್ದೇನೆ ಎನ್ನುವುದರ ಪರಿಕಲ್ಪನೆ ಬಂದಿರಬಹುದು. ಉಳಿದವರು ಇದೇನ್ ಗುರು ಉಪೇಂದ್ರನ ಸಿನೆಮಾ ತರಹ ಕಂಫೂಜನ್ ಕ್ರಿಯೇಟ್ ಮಾಡ್ತಾ ಇದ್ದೀಯ ಅಂತ ಅನ್ಕೋಬೇಡಿ.
ನಾನು ಕೇಳಿದ್ದು ಸರಳ ಪ್ರಶ್ನೆ. ಆದರೆ, ಕೆಲವರಿಗೆ ಪ್ರಶ್ನೆಯಲ್ಲಿಯೇ ಉತ್ತರ ಅಡಗಿರುವ ಪ್ರತ್ಯಕ್ಷ ಅನುಭವ ಆಗುತ್ತದೆ. ಇನ್ನೂ ಕೆಲವರಿಗೆ, ಪ್ರಶ್ನೆಯಿಂದ ಇನ್ನೂ ಹಲವು ಪ್ರಶ್ನೆಗಳು ಹುಟ್ಟಬಹುದು. ಹಾಗೆ ನೋಡಿದರೆ, ಪ್ರಶ್ನೆ ಹಾಗೂ ಉತ್ತರಗಳೆರಡೂ ಸಹ ಒಂದೇ ಎಂದರೆ ತಪ್ಪಾಗಲಾರದು. ಪ್ರತಿ ಪ್ರಶ್ನೆಗೂ ಉತ್ತರಗಳು ಇರುವಂತೆ, ಪ್ರತಿ ಉತ್ತರಕ್ಕೂ ಪ್ರಶ್ನೆಗಳನ್ನ ಹುಟ್ಟು ಹಾಕಬಹುದು.
ಕೇಳಿದ ಪ್ರಶ್ನೆಗೆ ಉತ್ತರ ಹೇಳ್ತೀಯ ಇಲ್ಲ ಇದೆ ತರಹ ಟೈಮ್ ಪಾಸ್ ಮಾಡ್ತೀಯಾ ಅಂತ ಹೇಳಬೇಡಿ. ಅಂಕಣಗಳ ವಿಶೇಷತೆಯೆಂದರೆ ಇದೆ. ಓದುಗರ ಜೊತೆಗೆ ಬರಹಗಾರ, ಬರಹಗಾರರು ಓದುಗನ ಜೊತೆಗೆ ಕನೆಕ್ಟ್ ಆಗಬೇಕು. ಹಾಗೆ ಆಗಬೇಕೆಂದರೆ, ನನು ನಾನಾಗಿಯೇ ಅಂದರೆ ನನ್ನ ವ್ಯಕ್ತಿತ್ವದ ರೀತಿಯಲ್ಲೇ ನಿಮ್ಮ ಜೊತೆ ಮಾತಿನಲ್ಲಿ ಬೆರೆಯಬೇಕು. ಇಲ್ಲವಾದರೆ, ನಿಮಗೂ ಬೋರು ಹಾಗೇ ನನಗೂ ಹೇಳಬೇಕಾಗಿದ್ದು ಹೇಳಲಿಲ್ಲ ಅನ್ನುವ ಅತೃಪ್ತಿ ಕಾಡುತ್ತದೆ.
ಇರಲಿ, ಈಗ ಪ್ರಶ್ನೆಗೆ ಬರುವುದಾದರೆ, ಇಲ್ಲಿಯವರೆಗೂ ಯಾರಾರಿಗೆ ಪ್ರಶ್ನೆ ಅರ್ಥ ಆಯಿತು ಅವರಿಗೆ ಧನ್ಯವಾದ. ತಿಳಿಯದವರಿಗೆ ಚಿಂತೆ ಏಕೆ ನಾನಿದಿನಲ್ಲ ಹೇಳೋಕೆ. ಓಕೆ ನಾನು ಕೇಳಿದ ಪ್ರಶ್ನೆ ನಿಮ್ಮ ಹುಟ್ಟು ಆಗಿದ್ದು ಯಾವಾಗ? ಅಂತ. ಸಾಮಾನ್ಯವಾಗಿ ಈ ಪ್ರಶ್ನೆ ಕೇಳಿದಾಗ ಹಲವು ಜನ ತಮ್ಮ ತಮ್ಮ ಜನ್ಮ ದಿನಾಂಕವನ್ನೋ ಇಲ್ಲ, ಜನ್ಮ ದಿನ ಅಂದರೆ ವಾರವನ್ನೋ ಹೇಳಬಹುದು. ಆದರೆ ಅದು ಮೇಲ್ನೋಟಕ್ಕೆ ಸರಿ ಅಂತ ಅನ್ನಿಸಿದರೂ, ಅದರ ಸರಿಯಾದ ಉತ್ತರ ನೀವೇ ಇದನ್ನ ಕಂಡುಕೊಳ್ಳಬೇಕು.
ಅರೇ ಮಾರಾಯ ಹೊರಗಿನು ಜಂಜಾಟ್ ಏನ್ ಕಡಿಮಿದ್ದು ಏನ್ ನೀನು ಬಂದಿ ತಲಿ ತಿನ್ನಾಕ್ ಅಂದ್ರೇನ? ಇಲ್ಲ ನಿಮ್ಮಾಣೆಗೂ ಇದರ ಉತ್ತರ ನೀವೇ ಕಂಡುಕೊಳ್ಳಬೇಕು. ಯಾಕೆಂದರೆ ನಾನು ಕೇಳಿದ ಪ್ರಶ್ನೆ ನಿಮ್ಮ ಲೌಕಿಕ ಬದುಕಿನ ಹುಟ್ಟಿನ ಬಗ್ಗೆ ಮಾತನಾಡುತ್ತಿಲ್ಲ. ನಾನು ಹೇಳುತ್ತಿರುವುದು ನಿಮ್ಮ ವ್ಯಕ್ತಿತ್ವ, ಆತ್ಮ, ಬುದ್ಧಿ, ಅರಿವು, ತಿಳುವಳಿಕೆ ಈ ಮುಂತಾದ ಅಂಶಗಳಿಂದ ನಾವು ಯಾರು?, ನಮ್ಮ ಉದ್ದೇಶ ಏನು?, ಎಲ್ಲರಂತೆ ಹುಟ್ಟಿ-ಬೆಳೆದು-ಸಾಯಲು ಮಾತ್ರ ನಾವು ಬಂದಿದ್ದೀವಾ? ಅನ್ನುವ ವಗೇರಾ, ವಗೇರಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ನಿಮ್ಮಲ್ಲಿ ಆಗುವ ಹೊಸ ವೈಚಾರಿಕತೆಯ ಹುಟ್ಟಿನ ಬಗ್ಗೆ ಕೇಳಿದ್ದು. ಅಂತಹ ಹುಟ್ಟು ಯಾವಾಗ ಆಯಿತು ಅಂತ ನೀವೇ ಉತ್ತರ ಕಂಡುಕೊಳ್ಳಬೇಕಲ್ಲವೇ? ಒಂದು ಸಂದರ್ಶನದಲ್ಲಿ ಬೀಚಿಯವರಿಗೆ ಸಂದರ್ಶಕರು ಇದೆ ಪ್ರಶ್ನೆಯನ್ನ ಕೇಳಿದಾಗ ಅವ್ರು ಕೊಟ್ಟ ಉತ್ತರ “ನನ್ನ ಹುಟ್ಟು ಯಾವಾಗ ಆಯಿತು ಅಂತ ನನ್ನ ಅರಿವಿಗಿನ್ನು ಬಂದಿಲ್ಲ” ಎಂಬುದು. ಹಾಗಾಗಿ ನಿಮ್ಮ ನೋಟ ನನ್ನ ನೋಟ ಒಂದೇ ವಿಷಯವನ್ನ ಗಮನಿಸಿದಾಗಲೂ, ಅದರ ಭಾವ ಭಿನ್ನವಾಗಿ ಪ್ರತಿಬಿಂಬಿಸುತ್ತದೆ. ಅದೇ ತರಹ ನಿಮ್ಮ ನಿಜವಾದ ಹುಟ್ಟು ಯಾವಾಗ ಆಯಿತು ಎಂಬುದನ್ನ ನಾವೇ ಅರಿಯಬೇಕು.
ವೆಲ್…. ನನ್ನ ಬರಹ, ಅಂಕಣ, ಮಾತು ನಿಮಗೆ ಬೇಜಾರು ತರಿಸಿಲ್ಲ ಎಂಬುದು ನನ್ನ ಭಾವನೆ. ಸಗಣಿಯನ್ನ ವಜ್ರದ ತಟ್ಟೆಯಲ್ಲಿ ಬಡಿಸುವ ಈಗಿನ ತೋರಿಕೆಯ ಕಾಲದಲ್ಲಿ, ಜನರ ಜೊತೆಗೆ ಕನೆಕ್ಟ್ ಆಗಲು ಇಷ್ಟಾದರೂ ನಾವೂ ನಮ್ಮ ಮಾತುಗಳನ್ನ ಲೈಟ್ ಆಗಿ ಹೇಳದಿದ್ದರೆ, ಕೆಲವರು ಆಪ್ಹೆಂಡ ಆಗುವ ಸಾಧ್ಯತೆ ಇರುತ್ತದೆ. ಸೋ, ಇರಲಿ ನಿಮ್ಮ ನಿಮ್ಮ ಹುಟ್ಟು ಯಾವಾಗ ಆಯಿತು ಎಂಬುದನ್ನ ಆದಷ್ಟು ಬೇಗ ಅರಿತುಕೊಳ್ಳಿ. ಸರಳ ಜೀವನವೇ, ಸಾಧನೆಗೆ ದಾರಿ. ಧನ್ಯವಾದಗಳು.😊🙏🏻
– ನಿಮ್ಮ R.J ಚೇತನ