Live Stream

[ytplayer id=’22727′]

| Latest Version 8.0.1 |

Local NewsState News

ಅಂಕಣ: ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಬದ್ಧತೆ ಇರಲಿ

ಅಂಕಣ: ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಬದ್ಧತೆ ಇರಲಿ

 

ಡಿಸಿ ಬಂದಿಲ್ಲ ಇನ್ನೂ
AE ಹಾಜರಾಗಿಲ್ಲ
ನೀವೇ DC ಆಗ್ರಿ ……

ಸಾಮಾನ್ಯವಾಗಿ
ಮೌಲ್ಯ ಮಾಪನ ಕೇಂದ್ರದಲ್ಲಿ
ಕೇಳಿ ಬರುವ ಮಾತುಗಳಿವು
ಏಕೆ ಹೀಗೆ……
ಸರಕಾರದ ಕೆಲಸ
ದೇವರ ಕೆಲಸ ಅಂತಾರೆ
ಆದರೆ ಇದು ನಿಜ ದೇವರ
(ಮಕ್ಕಳ) ಕೆಲಸ…….
ಇಲ್ಲಿಯೂ ಬದ್ಧತೆ ಅನ್ನೋದು
ಇಲ್ಲಾ ಅಂದ್ರೆ ಹೇಗೆ…
ಆತ್ಮೀಯರೇ……ಇದು ಎಲ್ಲ ಕಡೆಯೂ ಇಲ್ಲದಿರಬಹುದು.
ಎಲ್ಲರೂ ಹೀಗೆ ಎನ್ನಲಾಗದು.
ಅದರೆ …….ಇದು ಸತ್ಯ ಅಲ್ಲವೇ….

ಎಸ್ ಎಸ್ ಎಲ್ ಸಿ ಪರೀಕ್ಷೆ 2025 ಫಲಿತಾಂಶದ ಬಗ್ಗೆ ಸರಕಾರ ನೀಡುತ್ತಿರುವ ಹೇಳಿಕೆಗಳನ್ನು ಮಾದ್ಯಮದಲ್ಲಿ ತಾವೆಲ್ಲಾ ಗಮನಿಸಿರಬಹುದು. ಈ ಎಸ್ ಎಸ್ ಎಲ್ ಸಿ ಪರೀಕ್ಷೆ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಇಲಾಖೆಗೂ ಅತ್ಯಂತ
ಪ್ರಮುಖ ಘಟ್ಟವೆಂದೇ ಹೇಳಬಹುದು. ಉನ್ನತ ಶಿಕ್ಷಣ ಪರೀಕ್ಷೆಗಳಿಗೂ ಇಲ್ಲದ ಆದ್ಯತೆ, ಪ್ರಾಮುಖ್ಯತೆ ಇದಕ್ಕಿದೆ ಎಂದರೆ
ಅತಿಶಯೋಕ್ತಿ ಆಗಲಾರದು.

ಏಕೆಂದರೆ 1ರಿಂದ 10ನೇ ತರಗತಿವರೆಗೆ ಏಕರೂಪ ಶಿಕ್ಷಣ ಪಡೆದ ಮಗು ಭವಿತವ್ಯದ ಜೀವನೋಪಾಯಕ್ಕಾಗಿ ಸರಿಯಾದ ಶಿಕ್ಷಣದ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ಇದು ಪೂರಕವಾಗಿದೆ. ಆದ್ದರಿಂದಲೇ ಇದಕ್ಕೆ ಎಲ್ಲಿಲ್ಲದ ಮಹತ್ವವಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಹತ್ವಕಾಂಕ್ಷಿ ಕಾರ್ಯವಾದ ಈ ಎಸ್ ಎಸ್ ಎಲ್ ಸಿ ಪರೀಕ್ಷೆಯು ಆಯಾ ಕಾಲಘಟ್ಟಕ್ಕೆ ಮಾರ್ಪಾಡು ಹೊಂದುತ್ತಾ ವಿವಿಧ ಆಯಾಮಗಳನ್ನು ರೂಪಿಸುತ್ತಾ ವಿದ್ಯಾರ್ಥಿಗಳ ಭವಿಷ್ಯದ ನಿರ್ಣಾಯಕ ಹಂತವಾಗಿದೆ. ಕರ್ನಾಟಕವಷ್ಟೇ ಅಲ್ಲದೇ ಇಡೀ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ವರ್ಷವಿಡಿ ಓದಿ ನಿಗದಿತ ಸಮಯದಲ್ಲಿ ಪರೀಕ್ಷೆಗೆ ಹಾಜರಾಗಿ, ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆದು ತಮ್ಮ ಪರೀಕ್ಷಾ ಫಲಿತಾಂಶವನ್ನು ಎದುರು ನೋಡುತ್ತಿರುತ್ತಾರೆ. ಏಕೆಂದರೆ ಮುಂದಿನ ಸುಂದರ ಭವಿಷ್ಯ ನಿರ್ಮಾಣ ಈ ಹಂತದ ಫಲಿತಾಂಶವನ್ನುಆದರಿಸಿರುತ್ತದೆ. ಇಂತಹ ಪ್ರಮುಖ ಪರೀಕ್ಷಾ ಹಂತದ ನಿಖರ ಫಲಿತಾಂಶ ಕೊಡುವುದು ಇಲಾಖೆಯ ಗುರುತರ ಜವಾಬ್ದಾರಿಯಾಗಿದೆ ಇದು ಸಾಧ್ಯವಾಗುವುದು ಸರಿಯಾದ ಸಮಯ ಪ್ರಜ್ಞೆಯ ಮೌಲ್ಯಮಾಪನ ಕಾರ್ಯದಿಂದ ಮಾತ್ರ ಎಂದೇ ಹೇಳಬಹುದು.

ಹೌದು , “ಮೌಲ್ಯಮಾಪನ”ಎಂದರೆ ಈ ಪರೀಕ್ಷೆಗೆ ಸಂಬಂಧಿಸಿದಂತೆ ಹೇಳಬೇಕಾದರೆ ವಿದ್ಯಾರ್ಥಿಗಳು ಪಡೆದ ಜ್ಞಾನವನ್ನು ಅವರು ಬರೆದ ಉತ್ತರಗಳಿಂದ ಗುರುತಿಸಿ ನಿಖರ ಹಾಗೂ ವಸ್ತುನಿಷ್ಠ ಫಲಿತಾಂಶವನ್ನು ನಿಗದಿತ ಸಮಯದೊಳಗೆ ಕೊಡುವುದು. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ 8 ರಿಂದ 10 ದಿನಗಳವರೆಗೆ ಕ್ಯಾಮೆರಾ ವ್ಯವಸ್ಥೆಯಲ್ಲಿ ಅತ್ಯಂತ ಶಿಸ್ತಿನಿಂದ ಈ ಪರೀಕ್ಷೆ ನಡೆಯುತ್ತದೆ. ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಸಿದ್ಧತೆ ನಡೆಯುತ್ತದೆ.

ಒಂದು ಜಿಲ್ಲೆಯ ಉತ್ತರ ಪತ್ರಿಕೆಗಳು ಮತ್ತೊಂದು ಜಿಲ್ಲೆಗೆ ರವಾನಿಸಲ್ಪಟ್ಟು ಮೌಲ್ಯಮಾಪನಕ್ಕೆ ಒಳಪಡುತ್ತವೆ.
ಎಲ್ಲ ವಿಷಯ ಶಿಕ್ಷಕರಿಗೂ ಆದೇಶಗಳು ಕೂಡ ನಿಗದಿತ ಸಮಯದೊಳಗೆ ಆಯಾ ಶಾಲೆಗಳಿಗೆ ರವಾನೆಯಾಗುತ್ತವೆ. ಇದಕ್ಕೆಂದೇ ಪ್ರತಿ ಜಿಲ್ಲೆಯಲ್ಲಿ ಒಂದು ಪರಿಣಿತರ ತಂಡವೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಜಿಲ್ಲಾ ಹಂತದ ಎಲ್ಲ ಅಧಿಕಾರಿಗಳು ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ತಂಡಗಳಲ್ಲಿ ಕಾರ್ಯ ಹಂಚಿಕೆ ಮಾಡಿಕೊಂಡು ಕಾರ್ಯಪ್ರವರ್ತರಾಗುತ್ತಾರೆ. ಜಿಲ್ಲಾ ಹಂತದಲ್ಲಿ ನಡೆಯುವ ಈ ಮೌಲ್ಯಮಾಪನ ಕಾರ್ಯ ಅತ್ಯಂತ ಅಚ್ಚು ಕಟ್ಟಾಗಿ, ವ್ಯವಸ್ಥಿತವಾಗಿ ನಡೆಯಲು ಎಲ್ಲಾ ಹಂತದ ಅಧಿಕಾರಿಗಳ ಬದ್ಧತೆಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ.

ಶಿಕ್ಷಕರ ಮೊದಲ ಆದ್ಯತೆ ಎಂದರೆ ಮಕ್ಕಳ ಭವಿಷ್ಯಕ್ಕೆ ಪೂರಕವಾಗುವ ಅಂಶಗಳಿಗೆ ಮಹತ್ವ ನೀಡುವುದು. ಈ ಮೌಲ್ಯಮಾಪನ ಕಾರ್ಯವು ಕೂಡ ಅತಿ ಮುಖ್ಯವಾದ ಹಂತ. ಆದರೆ ಇಲಾಖೆಯಿಂದ ಆದೇಶವಾದರೂ ಕೆಲವು ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗದಿರುವುದು ಖೇದಕರ. ಒಂದು ಅಂದಾಜಿನ ಪ್ರಕಾರ ಶೇ 20 ರಿಂದ 25 ರಷ್ಟು ಸಹಾಯಕ ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರವಾಗುವುದಿಲ್ಲ. ಕಾರಣ ಅವರ ವೈಯಕ್ತಿಕ ಕೆಲಸಗಳು, ಅನಾರೋಗ್ಯ ಇರಬಹುದು. ಆದರೆ ಸಂಬಂಧಿತ ಅಧಿಕಾರಿಗಳಿಗೆ ಭೇಟಿಯಾಗಿ ವಿನಾಯತಿ ಪಡೆಯುವ ಸೌಜನ್ಯತೆಯಾದರೂ ನಮಗಿರಬೇಕು. ಇಲಾಖೆಯ ಆದೇಶದೊಂದಿಗೆ ಈ ಕಾರ್ಯಕ್ಕೆ ಗೈರಾಗಲು ಕಾರಣಗಳೇನೆಂದು ಸೂಕ್ತ ದಾಖಲೆ ಒದಗಿಸಿ ಅಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಪ್ರತಿ ಸರಕಾರಿ ನೌಕರನ/ಳ ಪ್ರಥಮ ಕರ್ತವ್ಯವಾಗಿದೆ.

ಯಾವುದೇ ರೀತಿಯ ಇಲಾಖಾ ಕಾರ್ಯಕ್ಕೆ ತೊಂದರೆ ಉಂಟು ಮಾಡುವುದು ಸರಿಯಲ್ಲ. ಇಲಾಖೆಯ ಪೂರ್ವಾನುಮತಿ ಪಡೆಯದೆ ಅಧಿಕಾರಿಗಳ ಗಮನಕ್ಕೆ ತರುವ ಸೌಜನ್ಯತೆ ತೋರದಿದ್ದರೆ ಅದು ಉದ್ಧಟತನದ ಪರಮಾವಧಿ ಎಂದೇ ವ್ಯಾಖ್ಯಾನಿಸಬಹುದು. ಕೆಸಿಎಸ್ಆರ್ ನಿಯಮಗಳು , ಅದು ಇದು ಹೀಗೆ ತರಹೇವಾರಿ ನಿಯಮಗಳು, ಕಾನೂನುಗಳು ಇಲಾಖೆಯಲ್ಲಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಅವುಗಳನ್ನು ಬಳಸಿ ಯಾವುದೇ ಕ್ರಮವನ್ನಾದರೂ ಆ ನೌಕರನ ಮೇಲೆ ತೆಗೆದುಕೊಳ್ಳಬಹುದು. ಏಕೆಂದರೆ ನಾವು ಸರಕಾರದ ಅಧೀನರು.ಸರಕಾರದ ಯಾವುದೇ ಅಭಿವೃದ್ಧಿಪರ ಕಾರ್ಯಗಳಿಗೆ ನಮ್ಮಿಂದ ಹಿನ್ನಡೆ ಆಗಬಾರದು. ಇದು ಪ್ರತಿ ಸರಕಾರಿ ನೌಕರರ ಬದ್ಧತೆಯಾಗಬೇಕು. ಈ ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದಂತೆ ಕೆಲವು ಶಿಕ್ಷಕರ ಗೈರು ಹಾಜರಾಗುವುದರಿಂದ ಹಾಜರಾದ ಕೆಲವೇ ಶಿಕ್ಷಕರ ಮೇಲೆ ಕಾರ್ಯದ ಒತ್ತಡ ಉಂಟಾಗಿ ಫಲಿತಾಂಶ ಘೋಷಣೆಯು ಕೂಡ ನಿಗದಿತ ಸಮಯಕ್ಕೆ ಆಗದೆ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ತೊಂದರೆ ಉಂಟಾಗಬಹುದು. ಇಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಸುಂದರ ಭವಿಷ್ಯವಿದೆ. ಆದ್ದರಿಂದ ಕೇವಲ ಶಿಕ್ಷಕರ ಬದ್ಧತೆ ಇಲ್ಲಿ ಕಾರ್ಯನಿರ್ವಹಿಸುತ್ತದೆ.

ಮೌಲ್ಯಮಾಪನ ಕಾರ್ಯಕೇಂದ್ರಗಳಲ್ಲಿ ಕಂಡುಬರುವ ಅನಾನುಕೂಲತೆಗಳು….
■ ಮೌಲ್ಯಮಾಪಕರಗೈರು ಹಾಜರಿ.
■ ಕೇಂದ್ರದಲ್ಲಿ ಅನಾವಶ್ಯಕ ಗದ್ದಲ, ಗೊಂದಲ ಮಾಡುವುದು.
■ ನಿಧಾನ ಗತಿಯ ಮೌಲ್ಯಮಾಪನ
■ ನಿಗದಿತ ಸಮಯಕ್ಕೆ ಮೌಲ್ಯಮಾಪನ ಮುಗಿಸದಿರುವುದು.
■ ಮಾರ್ಕ್ಸ್ ಎಂಟ್ರಿ ಮಾಡುವಲ್ಲಿ
ನೂಕು ನುಗ್ಗಲು.
■ ಮೌಲ್ಯಮಾಪನ ಕೇಂದ್ರಗಳಲ್ಲಿ ಕುಳಿತುಕೊಳ್ಳಲು ಉತ್ತಮ ಆಸನಗಳ ವ್ಯವಸ್ಥೆ ಇಲ್ಲದಿರುವುದು.
ಅಂದರೆ ಚಿಕ್ಕ ಮಕ್ಕಳ ಬೆಂಚ್ /ಡೆಸ್ಕ್ ಗಳು ಶಿಕ್ಷಕರಿಗೆ ದಿನಕ್ಕೆ 5/6 ತಾಸುಗಳಂತೆ 6/8 ದಿನಗಳು ಕೂಡಲು ತೊಂದರೆ ಆಗುತ್ತದೆ. (ಉದಾಹರಣೆ ಕಾಲು ಊತ, ಬೆನ್ನು ನೋವು ಮುಂತಾದವು.)

■ ಶುಗರ್ ,ಬಿಪಿ ಇರುವ ಶಿಕ್ಷಕರಿಗೆ 5- 6 ತಾಸು ಒಂದೇ ಕಡೆ ಕೊಡುವುದು ಸ್ವಲ್ಪ ಕಷ್ಟ.

■ ಮೌಲ್ಯಮಾಪಕರ ಗೈರು ಹಾಜರಾತಿಯಿಂದ ಹೆಚ್ಚು ಕಾರ್ಯದೊತ್ತಡ ಇರುವುದು.

■ ಅತಿ ದೂರದಿಂದ ಬರುವ ಶಿಕ್ಷಕರು ನಿಗದಿತ ಸಮಯಕ್ಕೆ ಕೇಂದ್ರವನ್ನು ತಲುಪದಿರುವುದು.
■ಅತಿ ಬಿಸಿಲಿನಿಂದ ತೊಂದರೆಗೆ ಒಳಗಾಗುವುದು.
■ ಹೊಸ ಶಿಕ್ಷಕರಿಗೆ ಮಾರ್ಗದರ್ಶನದ ಕೊರತೆ.

ಹೀಗೆ ಇನ್ನೂ ಅನೇಕ ಸಾಮಾನ್ಯ ಕೊರತೆಗಳನ್ನು ಗುರುತಿಸಬಹುದು.

ಈ ಸಾಮಾನ್ಯ ಕುಂದು ಕೊರತೆಗಳ ನಿವಾರಣೆಗೆ ಪೂರ್ವ ತಯಾರಿ ಹೇಗಿರಬೇಕು???????

■ ನಮ್ಮ ಇಲಾಖೆ ನಮ್ಮ ಹೆಮ್ಮೆ ■

ಇಲಾಖೆಯ ಅತ್ಯಂತ ಪ್ರಮುಖ ಕಾರ್ಯವಾದ ಈ ಮೌಲ್ಯಮಾಪನವು ಸುಗಮವಾಗಿ ನಡೆಯಲು ಇಲಾಖೆಯೂ ಈ ಕೆಳಗಿನ ಕೆಲವು ವಿಷಯಗಳ ಕಡೆ ಗಮನ ಹರಿಸಬೇಕೆಂಬುದು ಪ್ರೌಢಶಾಲಾ ಶಿಕ್ಷಕರ ಅಭಿಪ್ರಾಯ

ಅವೇನೆಂದರೆ…

■ ಮೌಲ್ಯ ಮಾಪನ ಕಾರ್ಯಕ್ಕೆ ಆದೇಶ ಕಳಿಸುವಾಗ ಕೆಲವು ಶಿಕ್ಷಕರಿಗೆ ಹೆಚ್ಚುವರಿಯಾಗಿ ಆದೇಶ ಕಳಿಸುವುದು.
(ಉದಾ ಚುನಾವಣಾ ಕಾರ್ಯದ ಪದ್ಧತಿಯಂತೆ ಇವರನ್ನು ರಿಸರ್ವಲ್ಲಿ ಇಡುವುದು.)

■ ವೈಯಕ್ತಿಕ ಕಾರಣಗಳಿಗೆ ದಾಖಲೆ ಸಲ್ಲಿಸಿ
ನಿಯಮಾನುಸಾರ ವಿನಾಯತಿ ಪಡೆದು ಗೈರಾಗುವ ಶಿಕ್ಷಕರ ಸ್ಥಾನಗಳಿಗೆ ರಿಸರ್ವ್ ಸಿಬ್ಬಂದಿಯನ್ನು ಬಳಸಿಕೊಳ್ಳುವುದು.

■ಚುನಾವಣಾ ಕಾರ್ಯದಂತೆ ಆದೇಶ ನೀಡಿದ ಎಲ್ಲಾ ಮೌಲ್ಯಮಾಪಕರಿಗೆ ಆಯಾ ಜಿಲ್ಲಾ ಹಂತದಲ್ಲಿ ಒಂದು ದಿನದ ತರಬೇತಿ ಹಮ್ಮಿಕೊಂಡು ಗೊಂದಲವಿರುವ ವಿಷಯಗಳ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸಿ ಚರ್ಚೆಗೆ ಅವಕಾಶ ನೀಡಿ ಮಾನಸಿಕವಾಗಿ ಶಿಕ್ಷಕರನ್ನು
ಈ ಕಾರ್ಯಕ್ಕೆ ಅಣಿಗೊಳಿಸುವುದು.

■ ಇದು ಅತ್ಯಂತ ಮುಖ್ಯವಾದ ಅಂಶ. ಏಕೆಂದರೆ ಪರೀಕ್ಷೆ ಮುಗಿದ ಕೂಡಲೇ ಒತ್ತಡದಲ್ಲಿದ್ದ ಶಿಕ್ಷಕರು ವಿಶ್ರಾಂತಿ ಪಡೆಯಲು ಬಯಸುವುದು ಸಹಜ.ಅಂತವರನ್ನು ಮತ್ತೆ ಇಲಾಖೆಗೆ ಮರಳಿ ತರಬೇಕಾದರೆ
ಒಂದು ದಿನದ ಪುನಶ್ಚೇತನ
ಕಾರ್ಯಾಗಾರ ತುಂಬಾ ಪ್ರಮುಖವಾಗಿದೆ.

■ ಅಲ್ಲದೆ ಹೊಸಬರಿಗೆ ಈ ಮೌಲ್ಯಮಾಪನ ಕಾರ್ಯದ ವಿವಿಧ ಹಂತಗಳ ಪರಿಚಯವು ಆಗುವುದರಿಂದ ಮೌಲ್ಯಮಾಪನ ಕಾರ್ಯ ಅತ್ಯಂತ ಸುಗಮವಾಗಿ
ಪರಿಣಾಮಕಾರಿ ಆಗುತ್ತದೆ.

■ ಅತೀ ಅನಿವಾರ್ಯತೆಗಳಿರುವ
ಶಿಕ್ಷಕರಿಗೆ ಮಾತ್ರ ಈ ಕಾರ್ಯದಿಂದ
ವಿನಾಯಿತಿ ಕೊಡುವುದು.

■ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು,
ಶೌಚಾಲಯದ ವ್ಯವಸ್ಥೆ ಸರಿಯಾಗಿರುವಂತೆ ಅನುಕೂಲ ಕಲ್ಪಿಸುವುದು.

■ ಶಿಕ್ಷಕರಿಗೆ ಆರೋಗ್ಯದ ತೊಂದರೆ ಉಂಟಾದರೆ ಕೂಡಲೇ ಸ್ಪಂದಿಸುವುದು.

■ ಮಾರ್ಕ್ಸ್ ಎಂಟ್ರಿ ಕಾರ್ಯವನ್ನು
ಗುಂಪಿನಲ್ಲಿ ಅವರವರ ಮೊಬೈಲ್ ಲ್ಲಿ ಮಾಡುವಂತಹ ಅವಕಾಶ
ಕೊಟ್ಟರೆ ಇದು ಇನ್ನೂ ಸರಳವಾಗುತ್ತದೆ.

■ ಮೌಲ್ಯಮಾಪನದಲ್ಲಿ ಕೆಲವು ಹೆಚ್ಚಿನ ಹಂತದ ಹುದ್ದೆಗಳಿಗೆ ಶಿಕ್ಷಕರ ಸೇವಾಜೇಷ್ಟತೆಯನ್ನು ಪರಿಗಣಿಸಿ ಆದೇಶ ಹೊರಡಿಸುವುದು.
ಇದರಿಂದ UPGRADE ಪದ್ಧತಿಯನ್ನು ತಪ್ಪಿಸುವುದು.

■ ಪ್ರೌಢಶಾಲಾ
ಮುಖ್ಯ ಶಿಕ್ಷಕರನ್ನು
ಕಡ್ಡಾಯವಾಗಿ ಡಿಸಿ ಎಂದೇ ಗುರುತಿಸುವುದು.

■ 15- 20 ವರ್ಷ ಸೇವೆ ಸಲ್ಲಿಸಿದ ಶಿಕ್ಷಕ/ಕಿಯರನ್ನು ಗುರುತಿಸಿ ಅವರನ್ನು ಹೆಚ್ಚಿನ ಹುದ್ದೆಗಳಿಗೆ ನಿಯೋಜಿಸುವುದು.

■ AE ಎಂದು ಆದೇಶ ಬಂದವರನ್ನು
DC ಎಂದು upgrade ಮಾಡುವುದರಿಂದ
ಗೊಂದಲ ಉಂಟಾಗಿ ಶಿಕ್ಷಕರಲ್ಲಿ
ಅಸಮಾಧಾನವು ಉಂಟಾಗುತ್ತದೆ.
ಇದನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸುವುದು.

■ ಚುನಾವಣಾ ಕಾರ್ಯದಂತೆ ಈ ಕೆಲಸವನ್ನು ಪೂರ್ವಯೋಚಿತವಾಗಿ ನಿಖರ ಮಾಹಿತಿ ಸಲ್ಲಿಸಿ ಎಲ್ಲ ಶಿಕ್ಷಕರ ಸೇವಾ ಜೇಷ್ಟತೆ ಪರಿಗಣಿಸಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ.

■ ಮೌಲ್ಯಮಾಪಕರಾಗಿ ನೇಮಕವಾದ ಶಿಕ್ಷಕರಿಗೆ ಕೇವಲ ಮೌಲ್ಯಮಾಪನ ಕಾರ್ಯ ಅಷ್ಟೇ ಮಾಡಲು ಅವಕಾಶ ನೀಡುವುದು ಇದರಿಂದ ಅತ್ಯಂತ ಸಮಾಧಾನವಾಗಿ ಅವರು ಕಾರ್ಯನಿರ್ವಹಿಸುತ್ತಾರೆ.

■ ಮಾರ್ಕ್ಸ್ ಎಂಟ್ರಿ ಕಾರ್ಯವನ್ನು ಸರಿಯಾಗಿ ಮಾಡಲು ಕಂಪ್ಯೂಟರ್ ಜ್ಞಾನವುಳ್ಳ ನುರಿತ ಶಿಕ್ಷಕರನ್ನು ಗುರುತಿಸಿ ಒಂದು ದಿನದ ತರಬೇತಿ ನೀಡಿ ಅವರನ್ನು ಕಂಪ್ಯೂಟರ್ ಕೆಲಸಕ್ಕೆ ಬಳಸಿಕೊಳ್ಳುವುದು .
ಇದರಿಂದ ಕಾರ್ಯ ಹಂಚಿಕೆಯಾಗಿ ಕೆಲಸವೂ ಸುಗಮ ಮತ್ತು ಪರಿಣಾಮಕಾರಿ ಆಗುತ್ತದೆ.

■ ಶಿಕ್ಷಕರು ವಿನಾಕಾರಣ ಗೈರು ಹಾಜರಾದಲ್ಲಿ ನೋಟಿಸ್ ಜಾರಿ ಮಾಡುವುದು ನಿರ್ದಿಷ್ಟ ಕಾರಣವಿಲ್ಲದಿದ್ದರೆ ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಾಗ ಮಾತ್ರ ಇಂತಹ ಕಾರಣವಿಲ್ಲದೆ ಗೈರಾಗುವವರ ಸಂಖ್ಯೆ ಕಡಿಮೆಯಾಗಿ ಇಲಾಖೆಯು ಒತ್ತಡ ಮುಕ್ತವಾಗುತ್ತದೆ.

■ ಈ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವ ಎಲ್ಲಾ ಹಂತ ಅಧಿಕಾರಿಗಳು ಪೂರ್ವಯೋಚಿ(ಜಿ)ತವಾಗಿ ಚುನಾವಣಾ ಕಾರ್ಯದಂತೆ ವ್ಯವಸ್ಥಿತವಾಗಿ ಕಾರ್ಯೋನ್ಮುಖರಾದರೆ ಈ ಎಲ್ಲ ಕುಂದು ಕೊರತೆಗಳಿಗೆ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
■■■■■■■■■■■■■■

■ ಕೊನೆಯ ಹನಿ ■

ಇಲಾಖೆ ಯಾವುದೇ ನಿಯಮ ಜಾರಿ ಮಾಡಿದರೂ ಇಲ್ಲಿ ಶಿಕ್ಷಕರ ಬದ್ಧತೆ ಮುಖ್ಯವಾಗುತ್ತದೆ. ಕಾರಣವಿಲ್ಲದೇ ಈ
ಕಾರ್ಯದಿಂದ ವಿಮುಖರಾಗದೇ ಬದ್ಧತೆಯಿಂದ ಕಾರ್ಯ ನಿರ್ವಹಿಸಿ ಇಲಾಖೆ ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಗೌರವವನ್ನು ಇಮ್ಮಡಿಗೊಳಿಸೋಣ.
ಶಿಕ್ಷಣ ಇಲಾಖೆಯ ಎಲ್ಲಾ ಹಂತಕ್ಕಿಂತಲೂ ಈ ಪ್ರೌಢಶಾಲಾ ಹಂತಕ್ಕೆ ವಿಶೇಷ ಗೌರವವಿದೆ. ಅಷ್ಟೇ ಏಕೆ ಸಮಾಜದಲ್ಲಿಯೂ ಕೂಡ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಸ್ಥಾನಮಾನವಿದೆ. ಮುಗ್ಧ ಮನಸ್ಸಿನ, ಹದಿಹರೆಯದ ಮಕ್ಕಳನ್ನು ತಿದ್ದಿ ಒಂದು ಪ್ರಮುಖ ಹಂತದ ಪರೀಕ್ಷೆಗೆ ತಯಾರಿಗೊಳಿಸುವ ನಾವು ಎಲ್ಲಾ ಹಂತದ ಶಿಕ್ಷಕರಿಗಿಂತಲೂ ಭಿನ್ನವಾಗಿ,ವಿಶೇಷವಾಗಿ ಗುರುತಿಸಲ್ಪಟ್ಟಿದ್ದೇವೆಂಬುದು ಅಷ್ಟೇ ಸತ್ಯ
ಈ ಗೌರವವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಬದ್ಧತೆ ನಮಗಿರಲಿ.ಏನಂತೀರಿ???

■■■■■■■■■■■■■■

ಈ ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದಂತೆ ಇನ್ನೂ ಏನಾದರೂ ಬದಲಾವಣೆಗಳು,ಸುಧಾರಣಾ ಕ್ರಮಗಳಿದ್ದರೆ ತಿಳಿಸಿ. ಎಲ್ಲರೂ ಸೇರಿ ಇದನ್ನು ಇನ್ನೂ ಉತ್ತಮಗೊಳಿಸೋಣ …
ನಿಮ್ಮ ಮುಕ್ತ ಅಭಿಪ್ರಾಯಗಳಿಗೆ
ಮುಕ್ತ ಸ್ವಾಗತವಿದೆ…

ದಯವಿಟ್ಟು ನಿಮಗೆ ಗೊತ್ತಿರುವ ಪೂರಕ ಮಾಹಿತಿ ಕೊಡಿ.
ನಿಮ್ಮ ಸ್ಪಂದನೆ ಬದಲಾವಣೆಗೆ ಕಾರಣವಾಗಬಹುದು.

💐💐💐💐💐💐💐💐

ಲೇಖಕಿ,ಹವ್ಯಾಸಿ ಬರಹಗಾರ್ತಿ

ಶ್ರೀಮತಿ ಮೀನಾಕ್ಷಿ ಸೂಡಿ
ಚೆನ್ನಮ್ಮನ ಕಿತ್ತೂರು
ಬೆಳಗಾವಿ ಜಿಲ್ಲೆ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";