ಸವದತ್ತಿ: ಶಿಕ್ಷಕ–ಸಾಹಿತಿ ವೈ.ಬಿ. ಕಡಕೋಳ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ವಿಶಿಷ್ಟ ಕೊಡುಗೆಗಳಿಗಾಗಿ ಡಾಕ್ಟರೇಟ್ ಪದವಿ ಪ್ರದಾನ ನಿಮಿತ್ತ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ವಿ.ಎಸ್. ಯಕ್ಕುಂಡಿ ಅವರು, ಕಡಕೋಳರು ಈ ಭಾಗದ ಐತಿಹಾಸಿಕ ಪರಂಪರೆಯ ದೇಗುಲಗಳು, ಊರುಗಳ ವಿಶೇಷತೆ, ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ವ್ಯಕ್ತಿಚಿತ್ರಣ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಾಹಿತ್ಯ ಸೃಜನೆಯಲ್ಲಿ ತೊಡಗಿಸಿಕೊಂಡಿದ್ದು, ಇದುವರೆಗೆ 40 ಕೃತಿಗಳು ಪ್ರಕಟವಾಗಿವೆ ಹಾಗೂ ನಾಲ್ಕು ಗ್ರಂಥಗಳು ಪ್ರಕಟಣೆಯ ಹಂತದಲ್ಲಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಮುನವಳ್ಳಿ ಪಟ್ಟಣದ ಶಿಕ್ಷಕ ಹಾಗೂ ಸಾಹಿತಿಯಾದ ವೈ.ಬಿ. ಕಡಕೋಳರಿಗೆ ಡಾಕ್ಟರೇಟ್ ಪದವಿ ಪ್ರದಾನವಾದ ಹಿನ್ನೆಲೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಶ್ರೀಗಳ ಆಶೀರ್ವಾದ, ಹಿರಿಯರ ಹಾರೈಕೆ ಹಾಗೂ ಸಮಾಜದ ಪ್ರೋತ್ಸಾಹವೇ ಅನೇಕ ಕೃತಿಗಳನ್ನು ರಚಿಸಲು ಪ್ರೇರಣೆಯಾಗಿದೆ ಎಂದು ಹೇಳಿದರು. “ತಲ್ಲೂರ ರಾಯನಗೌಡ್ರ: ಸಮಗ್ರ ಅಧ್ಯಯನ” ಮಹಾಪ್ರಬಂಧ ರಚಿಸುವ ಸಂದರ್ಭದಲ್ಲಿ ತಲ್ಲೂರ ರಾಯನಗೌಡ್ರ ಕುಟುಂಬದವರ ಸಹಕಾರ ಮರೆಯಲಾರದ ಅನುಭವವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ವ್ಯಕ್ತಿಚಿತ್ರಣಗಳು ಸೇರಿದಂತೆ ವಿಭಿನ್ನ ವಿಷಯಗಳ ಕುರಿತ ಕೃತಿಗಳನ್ನು ರಚಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪಂಚಲಿಂಗೇಶ್ವರ ಚಿಟ್ಸ್‌ನ ಅಧ್ಯಕ್ಷ ಉದಯ ಯಕ್ಕುಂಡಿ, ಶಿಕ್ಷಕ ವೀರಣ್ಣ ಕೊಳಕಿ, ಗಂಗಮ್ಮ ಕಡಕೋಳ, ಶಿವಲೀಲಾ ಕಡಕೋಳ, ಆತ್ಮಾನಂದ ಕಡಕೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಎಂ.ವೈ. ಮೆಣಸಿನಕಾಯಿ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















